ADVERTISEMENT

ಹಣದ ದಂಧೆಯಾದ ಆಂಬುಲೆನ್ಸ್‌ ಸೇವೆ

ಮಾನವೀಯತೆ ಮರೆತ ಚಾಲಕರು–ಮಾಲೀಕರು: ಮೇರೆ ಮೀರಿದ ಧನದಾಹ

ಜೆ.ಆರ್.ಗಿರೀಶ್
Published 23 ಮೇ 2021, 19:30 IST
Last Updated 23 ಮೇ 2021, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕೋಲಾರ: ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ ಸೇವೆಯು ಹಣ ಮಾಡುವ ದಂಧೆಯಾಗಿದ್ದು, ಆಂಬುಲೆನ್ಸ್‌ ಚಾಲಕರ ಹಾಗೂ ಮಾಲೀಕರ ಧನದಾಹ ಮೇರೆ ಮೀರಿದೆ.

ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆಯ ಆರ್ಭಟ ಜೋರಾಗಿದ್ದು, ಎಲ್ಲೆಡೆ ಆಂಬುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಕೊರೊನಾ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಕರೆತರಲು ಹಾಗೂ ಮೃತ ಸೋಂಕಿತರ ಶವಗಳ ಸಾಗಣೆಗೆ ಆಂಬುಲೆನ್ಸ್‌ ಸೇವೆ ಅತ್ಯಗತ್ಯವಾಗಿ ಬೇಕಾಗಿದೆ.

ಜನಸಂಖ್ಯೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಧಾರದಲ್ಲಿ ಆಂಬುಲೆನ್ಸ್‌ ಸೇವೆ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 19, ಆರೋಗ್ಯ ಕವಚ (108) ಯೋಜನೆಯ 18 ಮತ್ತು 26 ಖಾಸಗಿ ಆಂಬುಲೆನ್ಸ್‌ಗಳಿವೆ.

ADVERTISEMENT

ಕೊರೊನಾ ಸೋಂಕು ಹರಡುವಿಕೆ ಮತ್ತು ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾದಂತೆ ಆಂಬುಲೆನ್ಸ್‌ ಸೇವೆ ಬಯಸಿ ಬರುತ್ತಿರುವ ಕರೆಗಳು ಸಂಖ್ಯೆಯು ಏರಿಕೆಯಾಗಿದೆ. ಈ ಹಿಂದೆ ಅಪಘಾತ, ಹೆರಿಗೆ, ಅನಾರೋಗ್ಯಪೀಡಿತ ವಯೋವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯುವ ಉದ್ದೇಶಕ್ಕಾಗಿ ಆಂಬುಲೆನ್ಸ್‌ ಸೇವೆಗೆ ಕರೆಗಳು ಬರುತ್ತಿದ್ದವು. ಆದರೆ, ಈಗ ಕೋವಿಡ್‌ ಪ್ರಕರಣಗಳ ಸಂಬಂಧ ಹೆಚ್ಚಿನ ಕರೆ ಬರುತ್ತಿವೆ.

ತುರ್ತು ಸಂದರ್ಭದಲ್ಲಿ ಜನರ ಪ್ರಾಣ ರಕ್ಷಣೆಯ ಸೇವೆ ಮಾಡಬೇಕಾದ ಖಾಸಗಿ ಆಂಬುಲೆನ್ಸ್‌ ಚಾಲಕರು ಮತ್ತು ಮಾಲೀಕರು ಕೋವಿಡ್‌ ಪರಿಸ್ಥಿತಿಯ ಲಾಭ ಪಡೆದು ಮನಬಂದಂತೆ ಶುಲ್ಕ ನಿಗದಿಪಡಿಸಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ ಆಂಬುಲೆನ್ಸ್‌ ಚಾಲಕರು ಸೇವೆಯ ನೆಪದಲ್ಲಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ಹಣ ಕೊಟ್ಟರೂ ಸಿಗಲ್ಲ

ಜಿಲ್ಲೆಯಲ್ಲಿ ನಿತ್ಯ ಸರಾಸರಿ 500 ಮಂದಿಗೆ ಕೊರೊನಾ ಸೋಂಕು ಹರಡುತ್ತಿದ್ದು, ಆಂಬುಲೆನ್ಸ್‌ ಸೇವಾ ಶುಲ್ಕ ದಿಢೀರ್‌ ಗಗನಕ್ಕೇರಿದೆ. ಕೋವಿಡ್‌ ಪರಿಸ್ಥಿತಿ ಗಂಭೀರವಾಗುವುದಕ್ಕೂ ಮುನ್ನ 2 ತಿಂಗಳ ಹಿಂದೆ ಆಂಬುಲೆನ್ಸ್‌ ಸೇವೆಗೆ ಹೆಚ್ಚಿನ ಬೇಡಿಕೆಯಿರಲಿಲ್ಲ. ಆದರೆ, ಈಗ ಹಣ ಕೊಟ್ಟರೂ ಆಂಬುಲೆನ್ಸ್‌ ಸೇವೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್‌ ಸಂಕಷ್ಟದ ಅನಿವಾರ್ಯತೆಗೆ ಸಿಲುಕಿರುವ ಜನಸಾಮಾನ್ಯರು, ಆಂಬುಲೆನ್ಸ್ ಚಾಲಕರು ಕೇಳಿದಷ್ಟು ಹಣ ತೆರುವಂತಾಗಿದೆ. ಹಣ ಕೊಟ್ಟರೂ ಸಕಾಲಕ್ಕೆ ಆಂಬುಲೆನ್ಸ್‌ ಸೇವೆ ಸಿಗುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಜನರು ಸರ್ಕಾರಿ ಆಂಬುಲೆನ್ಸ್‌ ಸೇವೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ದೇಹಸ್ಥಿತಿ ಗಂಭೀರವಿರುವ ಸೋಂಕಿತರು ಮತ್ತು ಆರ್ಥಿಕ ಸ್ಥಿತಿವಂತರು ಹಣ ಕೊಟ್ಟು ಖಾಸಗಿ ಆಂಬುಲೆನ್ಸ್‌ ಸೇವೆ ಪಡೆಯುತ್ತಿದ್ದಾರೆ. ಆಂಬುಲೆನ್ಸ್‌ ಚಾಲಕರು ಸೋಂಕಿತರ ಆರ್ಥಿಕ ಸ್ಥಿತಿ ಆಧರಿಸಿ ದರ ನಿಗದಿಪಡಿಸುತ್ತಿರುವ ಬಗ್ಗೆ ಸಾಕಷ್ಟು ದೂರು ಕೇಳಿಬಂದಿವೆ.

ಏಕರೂಪ ದರವಿಲ್ಲ

ದೇಹಸ್ಥಿತಿ ಗಂಭೀರವಿರುವ ಕೊರೊನಾ ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರದ ಹೊರವಲಯದ ಆರ್.ಎಲ್‌.ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಆಂಬುಲೆನ್ಸ್‌ಗಳಲ್ಲಿ ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದ್ದು, ₹ 30 ಸಾವಿರದವರೆಗೆ ಹಣ ಪಡೆಯಲಾಗುತ್ತಿದೆ.

ಸಾಮಾನ್ಯ, ವೈದ್ಯಕೀಯ ಆಮ್ಲಜನಕ ಹಾಗೂ ವೆಂಟಿಲೇಟರ್ ವ್ಯವಸ್ಥೆಯಿರುವ ಆಂಬುಲೆನ್ಸ್‌ಗಳಿವೆ. ಈ ಆಂಬುಲೆನ್ಸ್‌ಗಳ ಸೇವೆಗೆ ಜಿಲ್ಲೆಯಲ್ಲಿ ಏಕರೂಪ ದರವಿಲ್ಲ. ಸೋಂಕಿತ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರು ಆಯ್ಕೆ ಮಾಡಿಕೊಳ್ಳುವ ಸೌಲಭ್ಯಯುತ ಆಂಬುಲೆನ್ಸ್‌ ಆಧಾರದಲ್ಲಿ ಹಣ ಪಡೆಯಲಾಗುತ್ತಿದೆ. ಸಾಮಾನ್ಯ, ಆಮ್ಲಜನಕ ಮತ್ತು ವೆಂಟಿಲೇಟರ್‌ ಸೌಲಭ್ಯವುಳ್ಳ ಆಂಬುಲೆನ್ಸ್‌ಗೆ ಪ್ರತ್ಯೇಕ ದರ ನಿಗದಿಯಾಗಿದೆ.

ಮಾನವೀಯತೆ ಮರೆತಿರುವ ಆಂಬುಲೆನ್ಸ್‌ ಚಾಲಕರು ಶವ ಸಾಗಣೆಯಲ್ಲೂ ಹಣ ಮಾಡಲು ಹೊರಟಿದ್ದಾರೆ. ಬೆರಳೆಣಿಕೆ ಚಾಲಕರು ಮಾತ್ರ ಉಚಿತವಾಗಿ ಸೇವೆ ಒದಗಿಸುತ್ತಿದ್ದಾರೆ. ಜಿಲ್ಲಾಡಳಿತವು ಆಂಬುಲೆನ್ಸ್‌ ಚಾಲಕರ ಹಗಲು ದರೋಡೆಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.