ADVERTISEMENT

ನೀರಾವರಿ ಹೋರಾಟ: ಜಾಗಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:18 IST
Last Updated 15 ಜುಲೈ 2020, 17:18 IST
ನೀರಾವರಿ ಹೋರಾಟ ವೇದಿಕೆಗೆ ಕೋಲಾರದ ಹಳೇ ಬಸ್ ನಿಲ್ದಾಣದ ಬಳಿ ಜಾಗ ನೀಡುವಂತೆ ನೀರಾವರಿ ಹೋರಾಟ ಸಮಿತಿ ಸದಸ್ಯರು ಕೋಲಾರದಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ನೀರಾವರಿ ಹೋರಾಟ ವೇದಿಕೆಗೆ ಕೋಲಾರದ ಹಳೇ ಬಸ್ ನಿಲ್ದಾಣದ ಬಳಿ ಜಾಗ ನೀಡುವಂತೆ ನೀರಾವರಿ ಹೋರಾಟ ಸಮಿತಿ ಸದಸ್ಯರು ಕೋಲಾರದಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ನೀರಾವರಿ ಹೋರಾಟ ಸಮಿತಿಯ ವೇದಿಕೆ ಸ್ಥಳಾಂತರಿಸಿ ನಗರದ ಹಳೇ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ನಿರ್ಮಿಸಿಕೊಡುವಂತೆ ಸಮಿತಿ ಸದಸ್ಯರು ಇಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಅವರಿಗೆ ಮನವಿ ಮಾಡಿದರು.

ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ನಡೆಸಲು ಸಮಿತಿ ಸದಸ್ಯರು ಈ ಹಿಂದೆ ನಗರಸಭೆಗೆ ಮನವಿ ಮಾಡಿ ಬಂಗಾರಪೇಟೆ ರಸ್ತೆಯ ಸರ್ವಜ್ಞ ಉದ್ಯಾನದ ಬಳಿ ಜಾಗ ಪಡೆದುಕೊಂಡಿದ್ದರು. 2016ರ ಜೂನ್‌ 12ರಂದು ಕನ್ನಡ ಚಿತ್ರರಂಗದ ನಟರು ನೀರಾವರಿ ಹೋರಾಟದ ವೇದಿಕೆ ಉದ್ಘಾಟಿಸಿದ್ದರು. ನಂತರ ಈ ವೇದಿಕೆಯಲ್ಲಿ ಸತತ 365 ದಿನಗಳ ಕಾಲ ಧರಣಿ ನಡೆಸಲಾಗಿತ್ತು.

ಇದೀಗ ಬಂಗಾರಪೇಟೆ ರಸ್ತೆ ಅಗಲೀಕರಣಕ್ಕಾಗಿ ಜಿಲ್ಲಾಡಳಿತವು ಈ ವೇದಿಕೆ ತೆರವುಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಶಾಶ್ವತ ಸ್ಥಳ ಪಡೆಯಲು ಸಮಿತಿ ಸದಸ್ಯರು ಬುಧವಾರ ನಡೆಸಿ ಚರ್ಚಿಸಿದರು. ಹಳೇ ಬಸ್‌ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್‌ ಪಕ್ಕದ ಜಾಗಕ್ಕೆ ಹೋರಾಟದ ವೇದಿಕೆ ಸ್ಥಳಾಂತರಿಸುವುದು ಸೂಕ್ತವೆಂದು ಸಮಿತಿ ಸದಸ್ಯರು ಸಭೆಯಲ್ಲಿ ನಿರ್ಣಯ ಕೈಗೊಂಡರು.

ADVERTISEMENT

ಬಳಿಕ ಸ್ಥಳಕ್ಕೆ ಬಂದು ಸಮಿತಿ ಸದಸ್ಯರಿಂದ ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಯು, ‘ಹೋರಾಟಕ್ಕೆ ಇಂದಿರಾ ಕ್ಯಾಂಟೀನ್‌ ಬಳಿ ಜಾಗ ನೀಡುವ ಸಂಬಂಧ ಜಿಲ್ಲಾಧಿಕಾರಿ ಜತೆ ಚರ್ಚಿಸಲು 3 ದಿನದೊಳಗೆ ಸಭೆ ನಿಗದಿಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

ನೀರಾವರಿ ಹೋರಾಟ ಸಮಿತಿ ಸದಸ್ಯರಾದ ಪ್ರಕಾಶ್, ವೆಂಕಟೇಶ್, ಜಯದೇವ ಪ್ರಸನ್ನ, ನಾಗರಾಜ್, ಮಂಜುನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.