ADVERTISEMENT

ಕೋಲಾರ: ಹೆಣ್ಣುಮಕ್ಕಳಿಬ್ಬರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಆಂಧ್ರದ ಮಹಿಳೆ

ಅಕ್ಕ ಸಾವು; ತಂಗಿ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 13:11 IST
Last Updated 7 ಡಿಸೆಂಬರ್ 2022, 13:11 IST
   

ಮುಳಬಾಗಿಲು (ಕೋಲಾರ ಜಿಲ್ಲೆ): ನಗರದ ಅಂಜನಾದ್ರಿ ಬೆಟ್ಟದ ಬಳಿ ಮಹಿಳೆಯೊಬ್ಬಳು ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಹಿರಿಯ ಮಗಳು ಮೃತಪಟ್ಟಿದ್ದು, ಕಿರಿಯ ಮಗಳಿಗೆ ಗಂಭೀರ ಗಾಯಗಳಾಗಿವೆ.

ಆಂಧ್ರಪ್ರದೇಶ ಚಿತ್ತೂರು ಜಿಲ್ಲೆ ಪಲಮನೇರು ತಾಲ್ಲೂಕು ಬೂಸಾನಿ ಕುರುವಪಲ್ಲಿ ಗ್ರಾಮದ ಜ್ಯೋತಿ (25 ವರ್ಷ) ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದವರು. ಅಕ್ಷಯ (7 ವರ್ಷ) ಮೃತ ಬಾಲಕಿ. ಉದಯಶ್ರೀ (6 ವರ್ಷ) ಎಂಬ ಬಾಲಕಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯರನ್ನು ಮುಳಬಾಗಿಲು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಟ್ಟದ ತಪ್ಪಲಿಗೆ ತನ್ನ ಇಬ್ಬರು ಮಕ್ಕಳನ್ನು ಕರೆದೊಯ್ದ ಮಹಿಳೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ತಾನು ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ ಮನಸ್ಸು ಬದಲಿಸಿದ್ದಾರೆ ಎನ್ನಲಾಗಿದೆ. ಅಷ್ಟರಲ್ಲಿ ಅಕ್ಷಯ ಸುಟ್ಟು ಕರಕಲಾಗಿದ್ದಾಳೆ. ಇನ್ನೊಬ್ಬ ಮಗಳು ಉದಯಶ್ರೀ ಸುಟ್ಟ ಗಾಯಗಳಿಂದ ರಾತ್ರಿಯಿಡೀ ನರಳಾಡಿದ್ದಾಳೆ.

ADVERTISEMENT

ಬುಧವಾರ ಬೆಳಿಗ್ಗೆ ಪಳ್ಳಿಗರಪಾಳ್ಯ ನಿವಾಸಿಗಳಿಗೆ ವಿಚಾರ ಗೊತ್ತಾಗಿದ್ದು, ಪೊಲೀಸರ ಗಮನಕ್ಕೆ ತಂದಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಬೆಟ್ಟದ ತಪ್ಪಲಿಗೆ ಬಂದಿದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಯ ತನ್ನ ಗ್ರಾಮದ ತಿರುಮಲೇಶ ಎಂಬುವರನ್ನು ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ.

ಮಕ್ಕಳಿಬ್ಬರನ್ನುಚಾಪೆ ಸುತ್ತಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ

ಬೆಟ್ಟದ ತಪ್ಪಲಿನ ಕಲ್ಲು ಬಂಡೆ ಬಳಿ ಸುಟ್ಟು ಕರಕಲಾಗಿದ್ದ ಹಿರಿಯ ಮಗಳು ಹಾಗೂ ಗಾಯಗೊಂಡು ನರಳಾಡುತ್ತಿದ್ದ ಕಿರಿಯ ಮಗಳಿಗೆ ಚಾಪೆ ಮುಚ್ಚಿ ಮಹಿಳೆ ಕುಳಿತ್ತಿದ್ದ ದೃಶ್ಯ ಮನಕಲಕುವಂತಿತ್ತು. ಗಾಯಗೊಂಡ ಮಗುವಿನ ನರಳಾಟ ಕೇಳಿ ಬುಧವಾರ ಬೆಳಿಗ್ಗೆ ಸ್ಥಳೀಯರು ಸ್ಥಳಕ್ಕೆ ಹೋದಾಗ ವಿಷಯ ಗೊತ್ತಾಗಿದೆ. ಸ್ಥಳೀಯರು ತೆಲುಗಿನಲ್ಲಿ ಮಹಿಳೆಯನ್ನು ಮಾತನಾಡಿಸಿ ವಿಷಯ ತಿಳಿದು ಪೊಲೀಸರ ಗಮನಕ್ಕೆ ತಂದರು.

ಬಾಲಕಿಯನ್ನು ಕೈಯಲ್ಲಿ ಎತ್ತಿಕೊಂಡುಬಂದ ಬಂದ ಪಿಎಸ್‌ಐ

ಸ್ಥಳಕ್ಕೆ ಧಾವಿಸಿದ ಮುಳಬಾಗಿಲು ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಿ.ಮಂಜುನಾಥ್ ಸುಟ್ಟು ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಕೈಯಲ್ಲಿ ಬಾಚಿಕೊಂಡು ಬೆಟ್ಟದಿಂದ ಕೆಳಕ್ಕೆ ಎತ್ತಿಕೊಂಡು ಬಂದು ಮಾನವೀಯತೆ ಮೆರೆದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಜುನಾಥ್‌ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.