ADVERTISEMENT

ರಕ್ಷಣೆಗೆ ಅಂಗನವಾಡಿ ನೌಕರರ ಒತ್ತಾಯ

ಕಾರ್ಯಕರ್ತೆಯರ ಮೇಲೆ ಹಲ್ಲೆ: ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 13:37 IST
Last Updated 13 ಜುಲೈ 2020, 13:37 IST
ರಕ್ಷಣೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಕೋಲಾರ ತಹಶೀಲ್ದಾರ್‌ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
ರಕ್ಷಣೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಕೋಲಾರ ತಹಶೀಲ್ದಾರ್‌ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.   

ಕೋಲಾರ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಂಗನವಾಡಿ ನೌಕರರಿಗೆ ರಕ್ಷಣೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಇಲ್ಲಿ ಸೋಮವಾರ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದರು.

‘ಕೋವಿಡ್–19 ಭೀತಿ ನಡುವೆಯೂ ಅಂಗನವಾಡಿ ನೌಕರರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಣೆ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿದೆ. ನೌಕರರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಧರಣಿನಿರತರು ದೂರಿದರು.

‘ಅಂಗನವಾಡಿ ಕೇಂದ್ರಗಳ ನಿರ್ವಹಣಾ ವೆಚ್ಚದ ಬಿಲ್‌ ಮತ್ತು ನೌಕರರ ಗೌರವಧನ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಕಾರ್ಯಕರ್ತೆಯರ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ನೌಕರರು ಸ್ವಂತ ಹಣದಲ್ಲಿ ಆಹಾರ ಪದಾರ್ಥ ಖರೀದಿಸುತ್ತಿದ್ದಾರೆ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಕಲ್ಪನಾ ಹೇಳಿದರು.

ADVERTISEMENT

‘ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಮತ್ತು ವಿದ್ಯುತ್‌ ಶುಲ್ಕ ಪಾವತಿಸಿಲ್ಲ. ಬಾಕಿ ಗೌರವಧನ ಮತ್ತು ಬಿಲ್‌ ಪಾವತಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುರಕ್ಷತೆ ನಿರ್ಲಕ್ಷಿಸಿದೆ: ‘ಮೊಟ್ಟೆ, ತರಕಾರಿ, ಆಹಾರ ಪದಾರ್ಥ ಖರೀದಿಸಲು ಹಣದ ಕೊರತೆಯಿದೆ. ಕಾರ್ಯಕರ್ತೆಯರು ತಮ್ಮ ಗೌರವಧನದಲ್ಲಿ ಮುಕ್ಕಾಲು ಭಾಗವನ್ನು ಆಹಾರ ಪದಾರ್ಥಗಳ ಖರೀದಿಗೆ ಮೀಸಲಿಡುವಂತಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ನೌಕರರ ಸುರಕ್ಷತೆ ನಿರ್ಲಕ್ಷಿಸಿದೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಅಂಗನವಾಡಿ ನೌಕರರ ಅಗತ್ಯತೆ ಪೂರೈಸಬೇಕು. ₹ 50 ಲಕ್ಷ ವಿಮೆ ಸೌಲಭ್ಯ ಕಲ್ಪಿಸಬೇಕು. ಗೌರವಧನ ಹೆಚ್ಚಳ ಮಾಡಬೇಕು ಮತ್ತು ಸುರಕ್ಷತಾ ಸಲಕರಣೆ ನೀಡಬೇಕು. ಬಸ್‌ ಪಾಸ್‌, ಆಹಾರ ಭತ್ಯೆ, ನಿವೃತ್ತಿ ವೇತನ ಕೊಡಬೇಕು. ಬಿಲ್‌ ಮತ್ತು ಗೌರವಧನದ ಬಾಕಿ ಬಿಡುಗಡೆ ಮಾಡಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ಪರಿಷ್ಕರಿಸಬೇಕು’ ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಮಂಜುಳಾ, ಪದಾಧಿಕಾರಿಗಳಾದ ಲಕ್ಷ್ಮೀದೇವಿ, ಉಮಾ, ರಾಜಮ್ಮ, ಜಯಲಕ್ಷ್ಮಿ, ನಾಗರತ್ನ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.