ADVERTISEMENT

ಹೈನೋದ್ಯಮ ಅವಳಿ ಜಿಲ್ಲೆಯ ಜೀವನಾಡಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 15:12 IST
Last Updated 6 ಮೇ 2019, 15:12 IST
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ವಿ.ಹರೀಶ್‌ ಕೋಲಾರದಲ್ಲಿ ಸೋಮವಾರ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ನೇತೃತ್ವದಲ್ಲಿ ಕೋಚಿಮುಲ್‌ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ವಿ.ಹರೀಶ್‌ ಕೋಲಾರದಲ್ಲಿ ಸೋಮವಾರ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ನೇತೃತ್ವದಲ್ಲಿ ಕೋಚಿಮುಲ್‌ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದರು.   

ಕೋಲಾರ: ‘ನಾನು ಶಾಸಕನಾಗಿದ್ದಾಗ ಹಾಲು ಉತ್ಪಾಕದರ ಸಹಕಾರ ಸಂಘಗಳ ಅಭಿವೃದ್ಧಿಗೆ ವೈಯಕ್ತಿಕವಾಗಿ ಸಾಕಷ್ಟು ಹಣಕಾಸು ನೆರವು ನೀಡಿದ್ದು, ಮತದಾರರು ತಮ್ಮ ಪಾಳಯದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ’ ಎಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಅವರ ಆಪ್ತರು ಇಲ್ಲಿ ಸೋಮವಾರ ಕೋಚಿಮುಲ್‌ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ಹೈನೋದ್ಯಮ ಅವಳಿ ಜಿಲ್ಲೆಗಳ ರೈತರ ಜೀವನಾಡಿಯಾಗಿದ್ದು, ಈ ಕ್ಷೇತ್ರವನ್ನು ಕಲುಷಿತಗೊಳಿಸಿದರೆ ರೈತರ ಶಾಪ ತಟ್ಟುತ್ತದೆ’ ಎಂದರು.

‘ಹಾಲು ಸಹಕಾರ ಸಂಘಗಳ ಅಭಿವೃದ್ದಿಗಾಗಿ ವೈಯುಕ್ತಿಕವಾಗಿ ₹ 2 ಲಕ್ಷ ಕೊಟ್ಟಿದ್ದೇನೆ ಹಾಗೂ ಒಕ್ಕೂಟದಿಂದ ₹ 5 ಲಕ್ಷ ನೀಡಲಾಗಿದೆ. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಲು 10 ಲೀಟರ್ ಸಾಮರ್ಥ್ಯದ ಸ್ಟೀಲ್ ಕ್ಯಾನ್ ಸಹ ಉಚಿತವಾಗಿ ವಿತರಿಸಿದ್ದೇನೆ. ನನ್ನ ಬೆಂಬಲಿಗ ರಾಜೇಂದ್ರಗೌಡ ಅವರು ಹೈನೋದ್ಯಮದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿರುವುದರಿಂದ ಅವರನ್ನು ಪುನರಾಯ್ಕೆ ಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.

ADVERTISEMENT

‘ದಕ್ಷಿಣ ಆಫ್ರಿಕಾದಲ್ಲಿ ಭೀಕರ ಜಲಕ್ಷಾಮ ಎದುರಾಗಿದೆ. ಸೈನಿಕರ ರಕ್ಷಣೆಯಲ್ಲಿ ನೀರು ವಿತರಣೆ ಮಾಡಲಾಗುತ್ತಿದೆ. ಅಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ಎದುರಾಗದಂತೆ ಎಚ್ಚರ ವಹಿಸಬೇಕು. ಇದಕ್ಕೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅತಿ ಮುಖ್ಯ’ ಎಂದು ತಿಳಿಸಿದರು.

‘ಭರಣಿ ಮಳೆ ಬಾರದಿರುವುದರಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಕ್ಷೀಣಿಸಿದೆ. ಕೆ.ಸಿ ವ್ಯಾಲಿ ಯೋಜನೆ ಪೂರ್ಣಗೊಂಡು ನೀರು ಬಂದರೂ ಅದರಲ್ಲೂ ಕೇಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ದುರಂತ. ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಂಡು ಜಿಲ್ಲೆಗೆ ನೀರು ಬರಲು ಸಾಕಷ್ಟು ಸಮಯ ಬೇಕು’ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.