ADVERTISEMENT

ಬಂಗಾರಪೇಟೆ: ಸರ್ಕಾರಿ ಕೆಲಸ ಲಂಚ ಪಡೆಯಲು ಸಿಕ್ಕ ಲೈಸನ್ಸ್‌ ಅಲ್ಲ

ಉಪ ಲೋಕಾಯುಕ್ತ ಬಿ.ವೀರಪ್ಪ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:22 IST
Last Updated 6 ಫೆಬ್ರುವರಿ 2026, 7:22 IST
ಬಂಗಾರಪೇಟೆಯ ಪುರಸಭೆ ಆವರಣದಲ್ಲಿ ನಡೆದ ಲೋಕಾಯುಕ್ತ ನ್ಯಾಯಾಲಯದಲ್ಲಿ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, ಜಿಲ್ಲಾಧಿಕಾರಿ ಎಂ.ಆರ್.ರವಿ ಇತರರು ಇದ್ದರು
ಬಂಗಾರಪೇಟೆಯ ಪುರಸಭೆ ಆವರಣದಲ್ಲಿ ನಡೆದ ಲೋಕಾಯುಕ್ತ ನ್ಯಾಯಾಲಯದಲ್ಲಿ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, ಜಿಲ್ಲಾಧಿಕಾರಿ ಎಂ.ಆರ್.ರವಿ ಇತರರು ಇದ್ದರು   

ಬಂಗಾರಪೇಟೆ: ‘ಸರ್ಕಾರಿ ಕೆಲಸ ಎಂದರೆ ಜನಸೇವೆಯ ಅವಕಾಶವೇ ಹೊರತು, ಲಂಚ ಪಡೆಯಲು ಸಿಕ್ಕ ಅಧಿಕೃತ ಲೈಸನ್ಸ್ ಅಲ್ಲ’ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪುರಸಭೆ ಆವರಣದಲ್ಲಿ ಗುರುವಾರ ಆಯೋಜಿಸದ್ದ ಲೋಕಾಯುಕ್ತ ನ್ಯಾಯಾಲಯದಲ್ಲಿ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಭ್ರಷ್ಟಾಚಾರವು ಇಂದು ಬೃಹತ್ ಆಲದ ಮರದಂತೆ ಬೆಳೆದು ನಿಂತಿದ್ದು, ರಾಷ್ಟ್ರದ ಪ್ರಗತಿಗೆ ಮಾರಕವಾಗಿದೆ’ ಎಂದು ತಿಳಿಸಿದರು.

‘ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಕಾಲಮಿತಿಯಲ್ಲಿ ಕೆಲಸವನ್ನು ಮುಗಿಸಿಕೊಡಬೇಕು. ಹಣಕ್ಕಾಗಿ ಜನರನ್ನು ಪೀಡಿಸುವುದು ಅಪರಾಧ. ಯಾರು ಕರ್ತವ್ಯ ಲೋಪ ಎಸಗುತ್ತಾರೊ ಅಥವಾ ಭ್ರಷ್ಟಾಚಾರದಲ್ಲಿ ತೊಡಗುತ್ತಾರೊ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಸಾಮಾನ್ಯರಿಗೆ ಇಂದಿಗೂ ನ್ಯಾಯ ಸಿಗುತ್ತಿಲ್ಲ. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಿಲ್ಲ. ಸರ್ಕಾರಿ ಕೆಲಸ ಪುಣ್ಯದ ಕೆಲಸ. ಅದನ್ನು ಸಮಾಜದ ಏಳಿಗೆಗೆ ಬಳಸುವ ಬದಲು, ಸ್ವಾರ್ಥಕ್ಕೆ ಬಳಸಿಕೊಳ್ಳುವುದು ದುರಂತ. ಅಧಿಕಾರಿಗಳ ನಡುವೆ ಸಮಾಜ ಸೇವೆ ಮಾಡುವಲ್ಲಿ ಸ್ಪರ್ಧೆ ಇರಬೇಕೇ ಹೊರತು, ಭ್ರಷ್ಟಾಚಾರ ಮಾಡುವುದಕ್ಕೆ ಅಲ್ಲ’ ಎಂದರು.

‘ಸಮಾಜ ಬದಲಾಗಬೇಕಾದರೆ ಮೊದಲು ಮತದಾರರು ಬದಲಾಗಬೇಕು. ಚುನಾವಣಾ ಸಮಯದಲ್ಲಿ ಹಣ ಪಡೆದು ಮತವನ್ನು ಮಾರಾಟ ಮಾಡಿಕೊಳ್ಳಬೇಡಿ. ಒಮ್ಮೆ ಮತ ಮಾರಿಕೊಂಡರೆ ಮುಂದಿನ ಐದು ವರ್ಷಗಳ ಕಾಲ ನೀವು ಅವರ ಗುಲಾಮರಂತೆ ಬಾಳಬೇಕಾಗುತ್ತದೆ’ ಎಂದು ಅವರು ಜನರಲ್ಲಿ ಜಾಗೃತಿ ಮೂಡಿಸಿದರು.

‘ಅಧಿಕಾರಿಗಳಿಗೆ ಲಗಾಮು ಹಾಕಲು ನೇರವಾಗಿ ತಾಲ್ಲೂಕುಗಳಿಗೆ ಭೇಟಿ ನೀಡುತ್ತಿದ್ದೇವೆ. ಜನರ ದೂರುಗಳನ್ನು ಸ್ಥಳದಲ್ಲೇ ಆಲಿಸಿ ನ್ಯಾಯ ಒದಗಿಸುವುದು ನಮ್ಮ ಗುರಿ’ ಎಂದರು.

‘ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೂ ವಿಲೇವಾರಿಗೆ ಇಷ್ಟು ವರ್ಷಗಳ ವಿಳಂಬವೇಕೆ? ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬೇಡಿ. ನಾನೇ ಒತ್ತುವರಿ ಮಾಡಿದ್ದರೂ ಬಿಡಬೇಡಿ, ತೆರವುಗೊಳಿಸಿ ಫೆನ್ಸಿಂಗ್ ಹಾಕಿ ಮರ ಬೆಳೆಸಿ’ ಎಂದು ತಹಶೀಲ್ದಾರ್ ಸುಜಾತ ಅವರಿಗೆ ತಾಕೀತು ಮಾಡಿದರು.

ಪುರಸಭೆಯ ವಾಣಿಜ್ಯ ಮಳಿಗೆಗಳಿಂದ ಬರಬೇಕಿದ್ದ ₹6.76 ಲಕ್ಷ ಬಾಡಿಗೆ ಬಾಕಿ ಇರಿಸಿಕೊಂಡಿದ್ದಕ್ಕೆ ಮುಖ್ಯಾಧಿಕಾರಿ ಸತ್ಯನಾರಾಯಣ ಅವರನ್ನು ಪ್ರಶ್ನಿಸಿ, ತಕ್ಷಣ ವಸೂಲಿಗೆ ಕ್ರಮ ವಹಿಸಲು ಸೂಚಿಸಿದರು.

ಸರ್ಕಾರಿ ವಸತಿ ಗೃಹಗಳು ದುಸ್ಥಿತಿ ಹಾಗೂ ಪ್ರವಾಸಿ ಮಂದಿರದಲ್ಲಿನ ಶೌಚಾಲಯ ಅವ್ಯವಸ್ಥೆ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದೇಶ ಕಾಯುವ ಮಾಜಿ ಸೈನಿಕರಿಗೆ ನೀಡಲು ಜಮೀನಿಲ್ಲ ಎನ್ನುತ್ತೀರಿ, ಆದರೆ ಎಕರೆಗಟ್ಟಲೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಎಂ.ಆರ್.ರವಿ, ಪೋಲಿಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಲೋಕಾಯುಕ್ತ ಎಸ್‌ಪಿ ಆಂಟೋನಿ ಜಾನ್, ಆಪ್ತ ಕಾರ್ಯದರ್ಶಿ ಎಸ್.ಅರವಿಂದ್, ಜಂಬಗಿ ರೇಣುಕಪ್ರಸಾದ್ ದಿಲೀಪ್, ತಹಶೀಲ್ದಾರ್ ಕೆ.ಎನ್.ಸುಜಾತ, ವೆಂಕಟೇಶಪ್ಪ, ದಯಾನಂದ್, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.