ADVERTISEMENT

ಎಪಿಎಂಸಿ ಸ್ಥಳಾಂತರ: ಜಮೀನಿಗೆ ಮನವಿ

ಟೊಮೆಟೊ–ತರಕಾರಿ ವಹಿವಾಟಿಗೆ ಸಮಸ್ಯೆ: ಮಾಜಿ ಸಚಿವ ವರ್ತೂರು ಪ್ರಕಾಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2021, 13:22 IST
Last Updated 4 ಮೇ 2021, 13:22 IST
ಜಿಲ್ಲಾ ಕೇಂದ್ರದ ಎಪಿಎಂಸಿ ಸ್ಥಳಾಂತರಕ್ಕೆ ಅಗತ್ಯವಿರುವ ಜಮೀನು ಮಂಜೂರು ಮಾಡಿಸುವಂತೆ ಮಾಜಿ ವರ್ತೂರು ಪ್ರಕಾಶ್‌ ಕೋಲಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕೇಂದ್ರದ ಎಪಿಎಂಸಿ ಸ್ಥಳಾಂತರಕ್ಕೆ ಅಗತ್ಯವಿರುವ ಜಮೀನು ಮಂಜೂರು ಮಾಡಿಸುವಂತೆ ಮಾಜಿ ವರ್ತೂರು ಪ್ರಕಾಶ್‌ ಕೋಲಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಜಿಲ್ಲಾ ಕೇಂದ್ರದ ಎಪಿಎಂಸಿ ಸ್ಥಳಾಂತರಕ್ಕೆ ಅಗತ್ಯವಿರುವ ಜಮೀನು ಮಂಜೂರು ಮಾಡಿಸುವಂತೆ ಮಾಜಿ ಸಚಿವ ವರ್ತೂರು ಪ್ರಕಾಶ್‌ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

‘ಕೋಲಾರ ಎಪಿಎಂಸಿಯು ಟೊಮೊಟೊ ವಹಿವಾಟಿಗೆ ದೇಶದಲ್ಲೇ 2ನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಎಪಿಎಂಸಿ ಆವರಣ ತುಂಬಾ ಕಿರಿದಾಗಿದೆ. ಇದರಿಂದ ಟೊಮೆಟೊ ಹಾಗೂ ಇತರೆ ತರಕಾರಿಗಳ ವಹಿವಾಟಿಗೆ ಸಮಸ್ಯೆಯಾಗುತ್ತಿದೆ’ ಎಂದು ವರ್ತೂರು ಪ್ರಕಾಶ್‌ ಹೇಳಿದರು.

‘ಎಪಿಎಂಇಸಿ ಆವರಣ 18 ಎಕರೆ 31 ಗುಂಟೆ ವಿಸ್ತಾರವಾಗಿದೆ. ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸ್ಥಳೀಯ ಎಪಿಎಂಸಿಗೆ ಟೊಮೆಟೊ ಆವಕವಾಗುತ್ತದೆ. ಎಪಿಎಂಸಿಯಿಂದ ಟೊಮೆಟೊ ಮತ್ತು ತರಕಾರಿಗಳು ದೇಶ ವಿದೇಶಕ್ಕೆ ರಫ್ತಾಗುತ್ತವೆ. ಆದರೆ, ಮಾರುಕಟ್ಟೆಯಲ್ಲಿನ ಜಾಗದ ಸಮಸ್ಯೆ ಕಾರಣಕ್ಕೆ ವರ್ತಕರು ಈ ಎಪಿಎಂಸಿಗೆ ಬರಲು ಹಿಂದೇಟು ಹಾಕುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸುಗ್ಗಿ ಕಾಲದಲ್ಲಿ ಎಪಿಎಂಸಿಗೆ ಪ್ರತಿನಿತ್ಯ ಸುಮಾರು 30 ಸಾವಿರ ಕ್ವಿಂಟಾಲ್‌ ಟೊಮೆಟೊ ಆವಕವಿರುತ್ತದೆ. ಎಪಿಎಂಸಿ ಆಡಳಿತ ಮಂಡಳಿಗೆ ಸುಂಕದ ರೂಪದಲ್ಲಿ ಕೋಟಿಗಟ್ಟಲೆ ಆದಾಯ ಬರುತ್ತದೆ. ಆದರೆ, ಆಡಳಿತ ಮಂಡಳಿಯು ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಡಳಿತ ಮಾರುಕಟ್ಟೆ ಅಭಿವೃದ್ಧಿ ನಿರ್ಲಕ್ಷಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿ ಪ್ರಾಂಗಣ ಕಿರಿದಾಗಿರುವುದರಿಂದ ರೈತರು ಮಾರುಕಟ್ಟೆ ಅಕ್ಕಪಕ್ಕದ ರಸ್ತೆಗಳಲ್ಲಿ ಟೊಮೆಟೊ ಸರಕು ಇಳಿಸುತ್ತಾರೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಜಾಗದ ಸಮಸ್ಯೆಯಿಂದಾಗಿ ಟೊಮೆಟೊ ಹರಾಜು ಆಗದೆ ರೈತರು ನಷ್ಟ ಅನುಭವಿಸುವ ಪರಿಸ್ಥಿತಿಯಿದೆ’ ಎಂದು ವಿವರಿಸಿದರು.

ಪ್ರಸ್ತಾವ ಸಲ್ಲಿಸಿತ್ತು: ‘ಎಪಿಎಂಸಿಗೆ ಹೆಚ್ಚುವರಿ ಜಮೀನು ಪಡೆಯಲು ಈ ಹಿಂದೆ ಚುನಾಯಿತ ಸಮಿತಿ ನಿರ್ಣಯ ಕೈಗೊಂಡು ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಮತ್ತು ಮಂಗಸಂದ್ರ ಗ್ರಾಮದ ಬಳಿ ಜಮೀನು ಗುರುತಿಸಿ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಆ ಜಮೀನುಗಳು ಅರಣ್ಯ ಇಲಾಖೆಗೆ ಸೇರಿದ ಕಾರಣಕ್ಕೆ ಹಾಗೂ ಕೆರೆಯಂಗಳ ಪ್ರದೇಶವಾಗಿದ್ದ ಕಾರಣ ಮಂಜೂರಾಗಲಿಲ್ಲ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಬಂದಿರುವುದರಿಂದ ಟೊಮೆಟೊ ಬೆಳೆ ವಿಸ್ತೀರ್ಣ ಹೆಚ್ಚಿದೆ. ಒಟ್ಟಾರೆ ಜಿಲ್ಲೆಯಲ್ಲಿ ಟೊಮೆಟೊ ಫಸಲು ಹೆಚ್ಚಿದ್ದು, ವಹಿವಾಟಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ಎಪಿಎಂಸಿ ಸ್ಥಳಾಂತರಕ್ಕೆ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಬೇಕು’ ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್‌.ಅರುಣ್‌ಪ್ರಸಾದ್, ಎಪಿಎಂಸಿ ಸದಸ್ಯ ವಿ.ಅಪ್ಪಯ್ಯಪ್ಪ, ವರ್ತೂರು ಪ್ರಕಾಶ್‌ ಬೆಂಬಲಿಗ ಬೆಗ್ಲಿ ಸೂರ್ಯಪ್ರಕಾಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.