ADVERTISEMENT

ಕಲೆ, ಕ್ರೀಡೆ ಮನುಷ್ಯನ ಅಂತರಂಗದ ಕಣ್ಣು: ಸಾಹಿತಿ ಪ್ರೊ.ಚಂದ್ರಶೇಖರ್ ನಂಗಲಿ

ಕುವೆಂಪು ನಾಟಕೋತ್ಸವ ಸಮಾರೋಪ ಸಮಾರಂಭ: ನೃತ್ಯ ರೂಪಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 13:41 IST
Last Updated 1 ಜನವರಿ 2020, 13:41 IST
ಕೋಲಾರದಲ್ಲಿ ಮಂಗಳವಾರ ರಾತ್ರಿ ನಡೆದ ಕುವೆಂಪು ನಾಟಕೋತ್ಸವದಲ್ಲಿ ಭರತ ನಾಟ್ಯ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು.
ಕೋಲಾರದಲ್ಲಿ ಮಂಗಳವಾರ ರಾತ್ರಿ ನಡೆದ ಕುವೆಂಪು ನಾಟಕೋತ್ಸವದಲ್ಲಿ ಭರತ ನಾಟ್ಯ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು.   

ಕೋಲಾರ: ‘ಕಲೆ ಮತ್ತು ಕ್ರೀಡೆ ಮನುಷ್ಯನ ಅಂತರಂಗದ ಎರಡು ಕಣ್ಣುಗಳು ಇದ್ದಂತೆ, ನಾಟಕಗಳು ಮನೋರಂಗಭೂಮಿಯಲ್ಲಿ ಬಹಿರಂಗವಾಗಿ ಮನುಷ್ಯನನ್ನು ಯಶ್ವಸಿಯತ್ತ ಕೊಂಡ್ಯೊಯುತ್ತದೆ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ್ ನಂಗಲಿ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರಂಗಕಹಳೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ರಾತ್ರಿ ನಡೆದ ೧೯ನೇ ಕುವೆಂಪು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಹಳೆಯ ಕಾವ್ಯಗಳಿಗೆ ಹೊಸ ತಂತ್ರಜ್ಞಾನದ ಮೂಲಕ ರಂಗಭೂಮಿಯ ಮೇಲೆ ಪ್ರದರ್ಶಿಸುವ ಮೂಲಕ ಜನಕ್ಕೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಮರಗಳಿಗೆ ಜೀವ ನೀಡುವ ಶಕ್ತಿ ಕುವೆಂಪು ಸಾಹಿತ್ಯಕ್ಕೆ ಇದೆ. ಮನೋ ರಂಗಭೂಮಿಯ ಮೇಲೆ ತಂದು ಹೊಸ ಅಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಸಾಹಿತ್ಯದ ಶಬ್ಧಗಳಲ್ಲಿ ದೃಶ್ಯಗಳನ್ನು ಕಾಣಬಹುದಾಗಿದೆ. ವೈವಿಧ್ಯಮಯ ನಾಟಕೋತ್ಸವಗಳು ನಾಡಿನಲ್ಲಿ ನಿರಂತರವಾಗಿ ನಡೆಯಬೇಕು’ ಎಂದು ಹೇಳಿದರು.

ADVERTISEMENT

ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ‘ಇವತ್ತಿನ ಸಾಂಸ್ಕೃತಿಕ ತಲ್ಲಣಗಳಿಗೆ ಕುವೆಂಪು ರಚಿಸಿರುವ ಓ ನನ್ನ ಚೇತನ ಕವಿತೆಯಲ್ಲಿ ಉತ್ತರ ಇದೆ. ಪೋಷಕರು ತಮ್ಮ ಮಕ್ಕಳಿಗೆ ಈ ಹಾಡನ್ನು ಕಲಿಸಿದರೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತೆ’ ಎಂದು ತಿಳಿಸಿದರು.

‘ರಂಗಕಹಳೆ ಕುವೆಂಪು ನಾಟಕೋತ್ಸವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುತ್ತದೆ. ಜಿಲ್ಲೆಯ ಜನತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ’ ಎಂದರು.

ರಂಗಕಹಳೆ ಸಂಚಾಲಕ ಓಹಿಲೇಶ ಲಕ್ಷ್ಮಣ ಮಾತನಾಡಿ, ‘ಸುಮಾರು ೪೫ ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ರಂಗ ಮುಖೇನ ಶಿಕ್ಷಣ ನೀಡುತ್ತಾ ಬಂದಿದ್ದೇವೆ, ಮಕ್ಕಳಲ್ಲಿ ಪ್ರತಿಭೆಯನ್ನು ಹೊರತರುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

ಜಯನಾಟ್ಯ ಕಲಾ ಅಕಾಡಮಿಯ ಕಲಾವಿದರಿಂದ ಕುವೆಂಪು ರಾಮಾಯಣ ದರ್ಶನಂ ನೃತ್ಯರೂಪಕ ಪ್ರದರ್ಶನ ನಡೆಯಿತು.

ನಾಟಕೋತ್ಸವ ಸಮಿತಿ ಅಧ್ಯಕ್ಷ ವಕೀಲ ಕೆ.ವಿ.ಶಂಕರಪ್ಪ, ಸಹ್ಯಾದ್ರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕಸಾಪ ಗೌರವ ಕಾರ್ಯದರ್ಶಿ ಆರ್.ಎಂ.ವೆಂಕಟಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.