
ಬೇತಮಂಗಲ: ಬಂಗಾರಪೇಟೆ ತಾಲ್ಲೂಕಿನ ಕಿಲುಕುಪ್ಪ ಗ್ರಾಮದ ನಾರಾಯಣಪ್ಪ ಹಾಗೂ ರತ್ನಮ್ಮ ಅವರ ಪುತ್ರಿ ಅಶ್ವಿನಿ ಅವರು ರಾಜ್ಯ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ 47ನೇ ರ್‍ಯಾಂಕ್ ಪಡೆದು ನ್ಯಾಯಾಧೀಶೆಯಾಗಿ ಆಯ್ಕೆಯಾದ ಹಿನ್ನೆಲೆ ಬೇತಮಂಗಲದ ರೇಣುಕಾ ಯಲ್ಲಮ್ಮ ಒಳಗದ ವತಿಯಿಂದ ಅಭಿನಂದಿಸಿದರು.
ಈ ವೇಳೆ ಅಶ್ವಿನಿ ಮಾತನಾಡಿ, ‘ನಿರಂತರ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು. ನಾನು ಮೊದಲ ಪ್ರಯತ್ನದಲ್ಲೇ ಸೋಲೊಪ್ಪಿಕೊಳ್ಳಲಿಲ್ಲ. ಸತತ ಪ್ರಯತ್ನದಿಂದ ಎಂಟನೇ ಬಾರಿ ಬರೆದ ಪರೀಕ್ಷೆಯಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.
‘ಈ ಸಾಧನೆಯ ಹಿಂದೆ ನನ್ನ ಕುಟುಂಬದ ಪ್ರೋತ್ಸಾಹ ಮರೆಯಲಾಗದ್ದು. ಅವರ ಬೆಂಬಲವೇ ನಾನು ಇಂದು ಈ ಸ್ಥಾನಕ್ಕೇರಲು ಸಾಧ್ಯ’ ಎಂದರು.
ರೇಣುಕಾ ಯಲ್ಲಮ್ಮ ಒಳಗದ ಜಿಲ್ಲಾಧ್ಯಕ್ಷ ಬಂಡುರು ನಾರಾಯಣ ಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುವುದು ಬಹಳ ಕಷ್ಟ. ಅಂತಹದರಲ್ಲಿ ಕುಟುಂಬದ ಕಷ್ಟಗಳನ್ನು ಮೀರಿ ಸತತ ಪ್ರಯತ್ನದಿಂದ ಪರೀಕ್ಷೆ ಎದುರಿಸಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದರು.
ಎಪಿಎಂಸಿ ನಿರ್ದೇಶಕ ರಾಮಚಂದ್ರಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ವೆಂಕಟರಮಣ, ಪ್ರವೀಣ್ ಕುಮಾರ್, ನಾರಾಯಣಸ್ವಾಮಿ, ವೆಂಕಟರಾಮ್, ಬಲ್ಲರಾಪ್ಪ, ವೆಂಕಟೇಶಯ್ಯ, ಕೃಷ್ಣಮೂರ್ತಿ, ಸುಬ್ಬರಾಯಪ್ಪ, ಮೂರ್ತಿ, ನಂದೀಶ್, ಜೆಸಿಬಿ ಮುನಿಯಪ್ಪ, ಕೆಂಚಪ್ಪ, ಅನಿಲ್, ಚಂದ್ರಪ್ಪ, ನತ್ತ ನಾಗರಾಜ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.