ADVERTISEMENT

ಚುಡಾಯಿಸಿದ್ದನ್ನು ವಿರೋಧಿಸಿದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ: 5 ಮಂದಿ ಬಂಧನ

ತಾಡಿಗೋಳ್‌ ಕ್ರಾಸ್‌ ಬಳಿ ನಡೆದಿದ್ದ ಘಟನೆ: ದೂರು–ಪ್ರತಿದೂರು ದಾಖಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 15:52 IST
Last Updated 11 ಸೆಪ್ಟೆಂಬರ್ 2021, 15:52 IST
ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್‌ ಕ್ರಾಸ್‌ ಬಳಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿಯರು
ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್‌ ಕ್ರಾಸ್‌ ಬಳಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿಯರು   

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್‌ ಕ್ರಾಸ್‌ ಬಳಿ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ 5 ಮಂದಿಯನ್ನು ಗೌನಿಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗೌನಿಪಲ್ಲಿ ಗ್ರಾಮದ ಸುಬ್ರಮಣಿ, ಕೊಂಡಾಮರಿ ಗ್ರಾಮದ ಗೋಪಿನಾಥ್‌ ಮತ್ತು ವಂಶಿ, ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಬಾಬು, ಪವನ್‌, ಸಾಯಿಪೂಜಾ ಸೇರಿದಂತೆ ಇತರೆ 48 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಬಾಬು ಮತ್ತು ಪವನ್‌ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಸರ್ಕಾರಿ ಬಾಲಕಿಯರ ಕಾಲೇಜು ವಿದ್ಯಾರ್ಥಿನಿಯರಾದ ಭಾವನಾ, ಯಶಸ್ವಿನಿ ಹಾಗೂ ಗೌರಿ ಅವರನ್ನು ನಾಲ್ಕೈದು ತಿಂಗಳಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚುಡಾಯಿಸುತ್ತಿದ್ದರು. ವಿದ್ಯಾರ್ಥಿನಿಯರು ಈ ಸಂಗತಿಯನ್ನು ತಮ್ಮ ಸಹೋದರರಿಗೆ ತಿಳಿಸಿದ್ದರು. ವಿದ್ಯಾರ್ಥಿನಿಯರ ಸಹೋದರರು ಬಾಬು ಮತ್ತು ಪವನ್‌ಗೆ ಮೂರ್ನಾಲ್ಕು ಬಾರಿ ಬುದ್ಧಿ ಹೇಳಿದರೂ ಅವರ ವರ್ತನೆ ಬದಲಾಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ವಿದ್ಯಾರ್ಥಿನಿಯರ ಸಹೋದರರು ಸೆ.2ರಂದು ಬಾಬು ಮತ್ತು ಪವನ್‌ ಜತೆ ಜಗಳವಾಡಿ ಹಲ್ಲೆ ನಡೆಸಿದ್ದರು. ಇದರಿಂದ ಕೋಪಗೊಂಡ ಬಾಬು ಹಾಗೂ ಪವನ್‌ ಸಂಚು ರೂಪಿಸಿ ಕುಟುಂಬ ಸದಸ್ಯರು, ಗ್ರಾಮಸ್ಥರನ್ನೆಲ್ಲಾ ಒಗ್ಗೂಡಿಸಿ ಸೆ.4ರಂದು ಭಾವನಾ, ಯಶಸ್ವಿನಿ ಹಾಗೂ ಗೌರಿ ಅವರನ್ನು ಬಸ್‌ನಿಂದ ಕೆಳಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ವಿದ್ಯಾರ್ಥಿನಿಯರ ಸಹೋದರರು, ಪೋಷಕರು ಹಾಗೂ ಕುಟುಂಬ ಸದಸ್ಯರ ಮೇಲೂ ಬಾಬು ಮತ್ತು ಪವನ್‌ ಕಡೆಯವರು ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾತಿ ಕಾರಣವಲ್ಲ: ‘ಜಾತಿ ವಿಚಾರಕ್ಕೆ ಈ ಘರ್ಷಣೆ ನಡೆದಿಲ್ಲ. ವಿದ್ಯಾರ್ಥಿನಿಯರನ್ನು ಚುಡಾಯಿಸಿದ ಕಾರಣಕ್ಕೆ ಗಲಾಟೆಯಾಗಿದೆ. ಘಟನೆ ಸಂಬಂಧ ಪೊಲೀಸರು ದೂರು ಮತ್ತು ಪ್ರತಿದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಎರಡೂ ಕಡೆಯವರ ಹೇಳಿಕೆ ಪಡೆದಿದ್ದಾರೆ’ ಎಂದು ಶ್ರೀನಿವಾಸಪುರ ತಹಶೀಲ್ದಾರ್‌ ಎಸ್.ಎಂ.ಶ್ರೀನಿವಾಸ್ ‘ಪ್ರಜಾವಾಣಿಗೆ’ ತಿಳಿಸಿದರು.

ಹಲ್ಲೆ ಘಟನೆಯಲ್ಲಿ 3 ವಿದ್ಯಾರ್ಥಿನಿಯರು ಹಾಗೂ ಅವರ ಕುಟುಂಬದ 6 ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಬಾಬು ಮತ್ತು ಪವನ್‌ ಕಡೆಯ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅಪರಾಧ ಸಂಚು, ಶಾಂತಿ ಕದಡುವ ಉದ್ದೇಶಕ್ಕೆ ನಿಂದನೆ, ಕಾನೂನುಬಾಹಿರವಾಗಿ ಗುಂಪುಗೂಡುವಿಕೆ, ದೊಂಬಿ, ಮಾರಕಾಸ್ತ್ರಗಳಿಂದ ಹಲ್ಲೆ, ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪೊಲೀಸರು ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.