ADVERTISEMENT

ಅಸ್ಪೃಶ್ಯತೆ ನಿವಾರಣೆ ಅರಿವು: ಹನುಮನಹಳ್ಳಿಯಲ್ಲಿ ದಲಿತರ ಗೃಹ ಪ್ರವೇಶ

​ಪ್ರಜಾವಾಣಿ ವಾರ್ತೆ
Published 25 ಮೇ 2025, 20:16 IST
Last Updated 25 ಮೇ 2025, 20:16 IST
ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿಯಲ್ಲಿ ಸಮಾಜನತೆಗಾಗಿ ಸಹ ಭೋಜನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ, ಅಧಿಕಾರಿಗಳು ಮತ್ತು ಪರಿಶಿಷ್ಟರು ಒಟ್ಟಿಗೆ ಊಟ ಮಾಡಿದರು
ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿಯಲ್ಲಿ ಸಮಾಜನತೆಗಾಗಿ ಸಹ ಭೋಜನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ, ಅಧಿಕಾರಿಗಳು ಮತ್ತು ಪರಿಶಿಷ್ಟರು ಒಟ್ಟಿಗೆ ಊಟ ಮಾಡಿದರು   

ಮುಳಬಾಗಿಲು: ಅಸ್ಪೃಶ್ಯತೆ ನಿವಾರಣೆ ಅರಿವು ಭಾರತ ನಡೆಸುತ್ತಿರುವ ‘ದಲಿತರ ಗೃಹ ಪ್ರವೇಶ’ ಹಾಗೂ ಸಹಬೋಜನ ಕಾರ್ಯಕ್ರಮ ತಾಲ್ಲೂಕಿನ ಹನುಮನಹಳ್ಳಿಯಲ್ಲಿ ಭಾನುವಾರ ನಡೆಯಿತು.

ಶಿಕ್ಷಕ ಸುಬ್ರಮಣಿ ಅವರ ಮನೆಯಲ್ಲಿ ‘ಸಮಾನತೆಗಾಗಿ ಸಹಭೋಜನ’ದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ,  ನಿವೃತ್ತ ಜಿಲ್ಲಾಧಿಕಾರಿ ಶಾಂತರಾಜ, ತಹಶೀಲ್ದಾರ್ ವಿ.ಗೀತಾ, ಮುಜರಾಯಿ ತಹಶೀಲ್ದಾರ್ ಶ್ರೀನಿವಾಸರೆಡ್ಡಿ, ಹಿರಿಯ ವಕೀಲ ಎಂ.ಎಸ್ ಶ್ರೀನಿವಾಸ ರೆಡ್ಡಿ, ಅರಿವು ಭಾರತ ತಂಡದ ಮುಖ್ಯಸ್ಥ ಡಾ. ಶಿವಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖಂಡರು ಒಟ್ಟಿಗೆ ಕುಳಿತು ಊಟ ಮಾಡಿದರು.

ಇದಕ್ಕೂ ಮುನ್ನ ನಲ್ಲೂರಿನ ವೀರಾಂಜನೇಯ ದೇವಾಲಯಕ್ಕೆ ಪರಿಶಿಷ್ಟರ ಸಮುದಾಯದೊಟ್ಟಗೆ ಪ್ರವೇಶ ಮಾಡಲಾಯಿತು.  ‘ಈ ದೇಗುಲ ಸರ್ವರಿಗೂ ಪ್ರವೇಶವಿದೆ’ ಎಂಬ ನಾಮ ಫಲಕ ಅಳವಡಿಸಿ.  ‘ಈ ದೇವಾಲಯ ಅಸ್ಪೃಶ್ಯತೆ ಮುಕ್ತ ದೇವಾಲಯ’ ಎಂದು ಜಿಲ್ಲಾಧಿಕಾರಿ ಘೋಷಿಸಿದರು.

ADVERTISEMENT

ಜಿಲ್ಲೆಯ 1,300 ದೇವಾಲಯಗಳಿಗೂ ಇದೇ ಫಲಕ ಅಳವಡಿಸುವ ಕಾರ್ಯ ಆರಂಭಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಆರ್‌. ರವಿ ತಿಳಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್‌. ರವಿ, ಜಿಲ್ಲೆಯಲ್ಲಿ ಅರಿವು ಭಾರತ ನಡೆಸುತ್ತಿರುವ ಸಾಮಾಜಿಕ ಬದಲಾವಣೆಯ ಕೆಲಸಗಳು ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗಲಿವೆ. ಇಲ್ಲಿನ ಪ್ರಯೋಗಗಳನ್ನು ಮತ್ತಷ್ಟು ವಿಸ್ತರಿಸುವ ಕೆಲಸ ಎಲ್ಲಾ ಕಡೆಗಳಲ್ಲೂ ನಡೆಯಬೇಕು ಎಂದು ಹೇಳಿದರು.

ಅಸಮಾನತೆ ತೊಲಗಿಸಲು ದಲಿತರಿಗಾಗಿ ‘ಗೃಹ ಪ್ರವೇಶ’ ಮತ್ತು ‘ದೇವಾಲಯ ಪ್ರವೇಶ’ ಕಾರ್ಯಕ್ರಮಗಳು ಹತ್ತು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ. ಈಗ ಅವುಗಳನ್ನು ಬೇರೆ ಬಗೆಯಲ್ಲಿ ವಿಸ್ತರಿಸುವ ಕೆಲಸ ಮಾಡಬೇಕಿದೆ. ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಬದಲಾವಣೆಯ ವೇಗವನ್ನು ಹೆಚ್ಚಿಸಬಹುದು ಎಂದು ಹೇಳಿದರು.

ತಹಶೀಲ್ದಾರ್ ವಿ.ಗೀತಾ, ಶಿಕ್ಷಣ ಪಡೆದವರು ಸಂವಿಧಾನ ಆಶಯ ಪಾಲಿಸಬೇಕು. ತಾಲ್ಲೂಕಿನ ಎಲ್ಲಾ ದೇವಾಲಯಗಳನ್ನು ಅಸ್ಪೃಶ್ಯತೆ ಮುಕ್ತ ದೇವಾಲಯವಾಗಿಸಲು ಶ್ರಮಿಸುವುದಾಗಿ ಹೇಳಿದರು. ಎಲ್ಲರಿಗೂ ಸಮಾನತೆಯ ಪ್ರತಿಜ್ಞೆ ವಿಧಿ ಬೋಧಿಸಿದರು.

ಇದೇ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಹನುಮನಹಳ್ಳಿ ಸುಬ್ರಮಣಿ ಮತ್ತು ನಲ್ಲೂರು ಸೋಮಪ್ಪ ಅವರಿಗೆ ‘ಗ್ರಾಮರತ್ನ’ ಪುರಸ್ಕಾರ ನೀಡಿ ಗೌರವಿಸಿದರು.

ಅರಿವು ಭಾರತ್ ಡಾ.ಜಿ.ಶಿವಪ್ಪ ಅರಿವು, ವಾರಿಧಿ ಮಂಜುನಾಥ ರೆಡ್ಡಿ,  ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉತ್ತನೂರು ಅರವಿಂದ್, ದಲಿತ ಮುಖಂಡ ಟಿ ವಿಜಯ ಕುಮಾರ್, ಜನಪ್ರಕಾಶನ ರಾಜಶೇಖರ ಮೂರ್ತಿ, ಪರ್ವ ಫಿಲ್ಮ್ ವಿನಯ್, ರಾಜಕಲ್ಲಹಳ್ಳಿ ಶ್ರೀನಿವಾಸ್, ನಾಗನಾಳ ರಮೇಶ್, ಕರಡುಬಂಡೆ ಮೂರ್ತಿ, ಕೊಂಡರಾಜನಹಳ್ಳಿ ಮಂಜುಳ, ವೆಂಕಟಾಚಲಪತಿ, ರಾಧಾಮಣಿ, ವಿ. ಜಿ. ಮಂಜುನಾಥ್, ಹನುಮನಹಳ್ಳಿ ಶ್ರೀನಿವಾಸ್, ಸುಬ್ರಮಣಿ, ಗೋವಿಂದೆಗೌಡ, ದಿಲೀಪ್, ಅದೀಪ್ ಇದ್ದರು.

ನಲ್ಲೂರು ಗ್ರಾಮದಲ್ಲಿ ದೇವಾಲಯ ಪ್ರವೇಶ ಮಾಡಿದ ಪರಿಶಿಷ್ಟರು
ಮುಳಬಾಗಿಲು ತಾಲ್ಲೂಕಿನ ಮೇಲಾಗಾಣಿ ಗ್ರಾಮದಲ್ಲಿ ಅಸ್ಪೃಶ್ಯತೆ ಸಡಿಲಗೊಂಡಿದ್ದು ಸಮಸಮಾಜದ ಕನಸನ್ನು ನನಸಾಗಿಸಲು ಎಲ್ಲರೂ ಕೈಜೋಡಿಸಬೇಕು
ಎಂ.ಎಸ್ ಶ್ರೀನಿವಾಸ ರೆಡ್ಡಿ ವಕೀಲ
ಮಾನವೀಯತೆ ಸದಾ ಕೆಲಸ ಮಾಡಲಿ
‘ಸ್ವತಂತ್ರ ಭಾರತವು ನಮ್ಮನ್ನು ಬದಲಾವಣೆಗೆ ಒತ್ತಾಯಿಸುತ್ತಿದೆ. ಇನ್ನು ತಡಮಾಡದೆ ಎಲ್ಲಾ ಬಾಗಿಲುಗಳು ಎಲ್ಲರಿಗೂ ಮುಕ್ತವಾಗಿ ತೆರೆಯಬೇಕು. ಮನೆಯಲ್ಲಿ ಮನಸ್ಸಿನಲ್ಲಿ ಯಾರಿಗೂ ಯಾವುದೇ ತಾರತಮ್ಯ ಇರಬಾರದು. ಮಾನವೀಯತೆ ಸದಾ ಕೆಲಸ ಮಾಡುತ್ತಿರಬೇಕು‘ ಎಂದು ನಿವೃತ್ತ ಜಿಲ್ಲಾಧಿಕಾರಿ ಶಾಂತರಾಜ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.