ADVERTISEMENT

ಕೋಲಾರ: ಕಾರ್ಪೊರೇಟ್‌ ಕಂಪನಿಗಳ ವಿರುದ್ಧ ಸಮರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 4:01 IST
Last Updated 9 ಆಗಸ್ಟ್ 2021, 4:01 IST
ಕೋಲಾರದ ಹುತ್ತೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೆಪಿಆರ್‌ಎಸ್ ಹಾಗೂ ಸಿಐಟಿಯು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸಿದ್ದರು
ಕೋಲಾರದ ಹುತ್ತೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೆಪಿಆರ್‌ಎಸ್ ಹಾಗೂ ಸಿಐಟಿಯು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸಿದ್ದರು   

ಕೋಲಾರ: ಕ್ವಿಟ್ ಇಂಡಿಯಾ ಚಳವಳಿಯ ನೆನಪಿನ ಅಂಗವಾಗಿ ರೈತ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಆಗಸ್ಟ್ 9ರಂದು ಬೃಹತ್ ಹೋರಾಟವು ದೇಶಾದ್ಯಂತ ನಡೆಯಲಿದ್ದು, ಈಹಿನ್ನೆಲೆಯಲ್ಲಿ ಕೆಪಿಆರ್‌ಎಸ್ ಹಾಗೂ ಸಿಐಟಿಯು ನೇತೃತ್ವದಲ್ಲಿ ತಾಲ್ಲೂಕಿನ ಹುತ್ತೂರು ಹೋಬಳಿಯ ಹಳ್ಳಿಗಳಲ್ಲಿ ಶನಿವಾರ ಜಾಗೃತಿ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತೀ ಹೆಜ್ಜೆಯಲ್ಲಿಯೂ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆ ಸರ್ವನಾಶಗೊಳಿಸುತ್ತಿದೆ. ಜನತೆಯ ಹಿತ ಕಾಪಾಡುವ ಬದಲು ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆ ಮೂಲಕ ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಧಾರೆಎರೆದು ಕೊಡುತ್ತಿದೆ. ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರವು ದೇಶದ ಕೃಷಿರಂಗವನ್ನೇ ಬುಡಮೇಲುಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ಅಂದು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ದೇಶದ ಸಂಪತ್ತನ್ನು ದೋಚಿದ ಬ್ರಿಟೀಷರ ವಿರುದ್ಧ ದೇಶದ ಜನತೆ ಹೋರಾಟ ನಡೆಸಿದ್ದರು. ಇಂದು ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ನೂರಾರು ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ದೇಶದ ರೈತ ಕಾರ್ಮಿಕರು ಒಂದಾಗಿ ಪ್ರಬಲ ಚಳವಳಿ ರೂಪಿಸಬೇಕಾಗಿದೆ ಎಂದು ಹೇಳಿದರು.

ADVERTISEMENT

ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರಾದ ವಿ.ನಾರಾಯಣರೆಡ್ಡಿ, ಹೊಲ್ಲಂಬಳ್ಳಿ ವೆಂಕಟೇಶಪ್ಪ, ಭೀಮರಾಜ್, ಅಪ್ಪಯ್ಯಣ್ಣ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಕಲ್ಪನಾ, ವೆಂಕಟಲಕ್ಷ್ಮಮ್ಮ, ರಾಜಮ್ಮ ಗ್ರಾಮ ಪಂಚಾಯಿತಿ ನೌಕರರ ಸಂಘದ ಮುನಿವೆಂಕಟಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.