ADVERTISEMENT

ಆಯುಷ್ಮಾನ್‌: ನಿಯಮ ಉಲ್ಲಂಘಿಸಿ ಬಿಲ್‌ ವಸೂಲಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 14:51 IST
Last Updated 10 ಮಾರ್ಚ್ 2022, 14:51 IST
ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕೋಲಾರದಲ್ಲಿ ಗುರುವಾರ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಕುಂದು ಕೊರತೆ ಸಭೆ ನಡೆಸಿದರು
ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕೋಲಾರದಲ್ಲಿ ಗುರುವಾರ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಕುಂದು ಕೊರತೆ ಸಭೆ ನಡೆಸಿದರು   

ಕೋಲಾರ: ‘ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಶಿಫಾರಸು ಆದ ರೋಗಿಗಳಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳು ಬಿಲ್‌ ಕಟ್ಟಿಸಿಕೊಂಡಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಹಣ ಪಡೆದಿರುವ ಆಸ್ಪತ್ರೆಗಳು ಪಡೆದಿರುವ ಹಣವನ್ನು ಫಲಾನುಭವಿಗಳಿಗೆ ವಾಪಸ್‌ ಕೊಡಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಆಯುಷ್ಮಾನ್‌ ಭಾರತ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸುಗೊಂಡ ರೋಗಿಗಳಿಂದ ಚಿಕಿತ್ಸೆಗೆ ಹಣ ಪಡೆಯುವಂತಿಲ್ಲ. ಆದರೂ ಕೆಲ ಆಸ್ಪತ್ರೆಗಳ ಈ ನಿಯಮ ಉಲ್ಲಂಘಿಸಿ ಹಣ ಪಡೆದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಿಂದ ಶಿಫಾರಸ್ಸು ಮಾಡಿ ಚಿಕಿತ್ಸೆಗಾಗಿ ಕಳುಹಿಸಲಾಗಿದ್ದ ಕೋದಂಡರಾಮ ಎಂಬುವರಿಂದ ಜಾಲಪ್ಪ ಆಸ್ಪತ್ರೆ ಆಡಳಿತ ಮಂಡಳಿಯು ₹ 31 ಸಾವಿರ ಕಟ್ಟಿಸಿಕೊಂಡಿದೆ. ಇದು ಸರಿಯಲ್ಲ. ಆಯುಷ್ಮಾನ್‌ ಭಾರತ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕುಟುಂಬದ ಸದಸ್ಯರಿಗೆ ₹ 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಹೀಗಾಗಿ ಜಾಲಪ್ಪ ಆಸ್ಪತ್ರೆಯು ಶೀಘ್ರವೇ ಕೋದಂಡರಾಮ ಅವರಿಗೆ ಹಣ ಮರುಪಾವತಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಆಯುಷ್ಮಾನ್‌ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆ ನೀಡಲಾಗುವುದು. ಬಿಪಿಎಲ್ ಕುಟುಂಬದವರಿಗೆ ₹ 5 ಲಕ್ಷದವರೆಗೆ ಮತ್ತು ಎಪಿಎಲ್ ಕುಟುಂಬದವರಿಗೆ ₹ 1.50 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಶೇ 30ರಷ್ಟು ಹಣವನ್ನು ಸರ್ಕಾರ ನೀಡುತ್ತದೆ. ಉಳಿದ ಹಣವನ್ನು ರೋಗಿ ಭರಿಸಬೇಕು’ ಎಂದು ಯೋಜನೆಯ ನೋಡಲ್‌ ಅಧಿಕಾರಿ ಡಾ.ನಾರಾಯಣಸ್ವಾಮಿ ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎನ್‌.ವಿಜಯ್‌ಕುಮಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.