ಕೋಲಾರ: ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು (ಈದ್–ಉಲ್–ಅದ್ಹಾ) ಮುಸ್ಲಿಂ ಸಮುದಾಯದವರು ಶನಿವಾರ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಬೆಳಿಗ್ಗೆ 9ಕ್ಕೆ ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಸಂಗೊಂಡಹಳ್ಳಿಯ ಮೌಲಾ ಖಾಜ ಈದ್ಗಾ ಮೈದಾನದಲ್ಲಿ ಮೌಲಾನ ಮೌಲ್ವಿ ನಜೀಮ್ ಅಲಿ ಆಶ್ರಫಿ ಸಾಹೇಬ್ ನೇತೃತ್ವದಲ್ಲಿ ಈದ್ ಉಲ್ ಅದ್ಹಾ ಪ್ರಾರ್ಥನೆ ನಡೆಯಿತು.
ಬೆಂಗಳೂರು ರಸ್ತೆಯ ಶಾಹಿ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 10ಕ್ಕೆ ಮೌಲಾನ ಮೌಲ್ವಿ ಮುಫ್ತಿ ಮೊಹಮ್ಮದ್ ಅಸಾದುಲ್ಲಾ ಖಾನ್ ಖಾಸ್ಮೀ ಸಾಹೇಬ್ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು.
ಪ್ರಾರ್ಥನೆ ನೆರವೇರಿಸಿ ಹಬ್ಬದ ಸಂದೇಶ ಸಾರಿದರು. ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬೆರೆತು ಬಾಳುವಂತೆ ಕರೆ ನೀಡಿದರು.
ಎರಡೂ ಈದ್ಗಾ ಮೈದಾನಗಳಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುಂಚೆ ಬೆಳಿಗ್ಗೆ 7 ಗಂಟೆಯಿಂದಲೇ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಾಹುವಿನ ಸ್ಮರಣೆ ಮಾಡಿದರು.
ಬೆಂಗಳೂರು ರಸ್ತೆಯ ಶಾಹಿ ಈದ್ಗಾ ಮೈದಾನದಲ್ಲಿ ಹೆಚ್ಚು ಜನರು ಸೇರಿದ್ದರಿಂದ ಕೆಲವರು ಪಕ್ಕದಲ್ಲೇ ಇರುವ ಮೇಲ್ಸೇತುವೆ ಮೇಲೂ ಕುಳಿತು ಪ್ರಾರ್ಥನೆ ಸಲ್ಲಿಸಿದರು.ಆಗ ಸಂಚಾರ ನಿರ್ಬಂಧಿಸಲಾಗಿತ್ತು. ಪ್ರಾರ್ಥನೆಯ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಶಾಂತಿ ಮತ್ತು ಸುವ್ಯವಸ್ಥೆಯಿಂದ ಬಕ್ರೀದ್ ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಎಂ. ನೇತೃತ್ವದಲ್ಲಿ ಪೊಲೀಸರು ಎರಡೂ ಈದ್ಗಾ ಮೈದಾನಗಳಲ್ಲಿ ಬಂದೋಬಸ್ತ್ ಕಲ್ಪಿಸಿದ್ದರು. ಕೆಲವೆಡೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು.
ಮಹಿಳೆಯರು, ವೃದ್ಧರು ಮನೆಗಳಲ್ಲೇ ವಿಶೇಷ ಪ್ರಾರ್ಥನೆ ಮಾಡಿದರು. ಮಕ್ಕಳು, ಯುವಕರು ಹೊಸ ಉಡುಗೆ ಧರಿಸಿದ ಸಂಭ್ರಮದಲ್ಲಿದ್ದರು. ಪ್ರಾರ್ಥನೆಯ ಬಳಿಕ ಪರಸ್ಪರ ಶುಭ ಕೋರಿದರು. ಮನೆಗಳಲ್ಲಿ ಕೂಡ ಗೃಹಿಣಿಯರು ನಸುಕಿನಿಂದಲೇ ಆಚರಣೆಯ ತಯಾರಿಯಲ್ಲಿ ತೊಡಗಿದ್ದರು. ಈದ್‌ನ ವಿಶೇಷ ಖಾದ್ಯಗಳನ್ನು ತಯಾರಿಸಿದ್ದರು. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸಿಹಿ ಹಾಗೂ ಮಾಂಸದ ಊಟ ಸವಿದರು.
ಮುಸ್ಲಿಂ ಸಮುದಾಯದವರು ಬಕ್ರೀದ್‌ನಲ್ಲಿ ಜಕಾತ್ (ದಾನ) ನೀಡುವುದು ವಿಶೇಷ. ಆರ್ಥಿಕವಾಗಿ ಸದೃಢರಾಗಿರುವವರು ಸಮುದಾಯದ ಬಡವರಿಗೆ ದಾನ ಮಾಡುವುದು ಸಂಪ್ರದಾಯ. ಮುಸ್ಲಿಂ ಧರ್ಮದ ಪಂಚಸೂತ್ರಗಳಲ್ಲಿ ಒಂದಾದ ಜಕಾತ್ ಪಾಲಿಸಿದರೆ ಅಲ್ಲಾಹುವಿನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ. ಈ ಕಾರಣ ಈ ಹಬ್ಬದಲ್ಲಿ ಆಶಕ್ತರಿಗೆ ದಾನ ಮಾಡಲಾಗುತ್ತದೆ. ಮನೆಗಳಲ್ಲಿ ಬಕ್ರೀದ್ ವಿಶೇಷವಾಗಿ ಕುರ್ಬಾನಿ ನೀಡಲಾಗುತ್ತದೆ.
ಶುಭ ಕೋರಿದ ಮುಖಂಡರು: ಶಾಹಿ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ಮುಖಂಡ ಕೆ.ವಿ.ಗೌತಮ್ ಸೇರಿದಂತೆ ಹಲವರು ಮುಖಂಡರು ಪಾಲ್ಗೊಂಡಿದ್ದರು. ಬಳಿಕ ಮುಸ್ಲಿಂ ಸಮುದಾಯದವರಿಗೆ ಶುಭಾಶಯ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.