ಕೋಲಾರ: ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಬಾಲಹಿತೈಷಿ ಕಾರ್ಯಕ್ರಮದಡಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲು ಆಸಕ್ತರಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಅರ್ಜಿ ಆಹ್ವಾನಿಸಿದೆ.
ಮಾರ್ಗದರ್ಶಕರು ಮಕ್ಕಳು ಸಂಕಷ್ಟದ ಪರಿಸ್ಥಿತಿಯಿಂದ ಹೊರಬಂದು ಮೊದಲಿನಂತೆ ಸಾಮಾನ್ಯ ಜೀವನ ನಡೆಸಲು ಅನುವಾಗುವಂತೆ ಭಾವನಾತ್ಮಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬೆಂಬಲ ನೀಡಬಹುದು. ಮಾರ್ಗದರ್ಶಕರಿಗೆ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ತರಬೇತಿ ಕೊಡಿಸಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಲ್ಲಿ ಆತ್ಮಸ್ಥೆರ್ಯ ತುಂಬಿ ಅವರ ಬೆಳವಣಿಗೆಗೆ ಬೆಂಬಲ ಹಾಗೂ ಸಹಾಯ ನೀಡಲು ಇದೊಂದು ಸುವರ್ಣಾವಕಾಶ. ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುವವರಿಗೆ ಇಲಾಖೆಯಿಂದ ಯಾವುದೇ ಗೌರವಧನ, ಶುಲ್ಕ ಪಾವತಿಸುವುದಿಲ್ಲ. ಇದು ಸಾಮಾಜಿಕ ಜವಾಬ್ದಾರಿಯಾಗಿದ್ದು, ಸರ್ಕಾರದ ಬಾಲಹಿತೈಷಿ ಯೋಜನೆಯಡಿ ಆಸಕ್ತರು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಆಸಕ್ತರು ವೆಬ್‌ಸೈಟ್‌ನಲ್ಲಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೂನ್ 26ರೊಳಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೋಲಾರ ವಿಳಾಸಕ್ಕೆ ಸಲ್ಲಿಸಬಹುದು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಯಲ್ಲಿ ನೇರವಾಗಿ ಅರ್ಜಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ 08152 220166 ದೂರವಾಣಿ ಸಂಖ್ಯೆ ಅಥವಾ 9066345708 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.