ADVERTISEMENT

ಬೆಂಗಳೂರು ಉತ್ತರ ವಿ.ವಿ ಘಟಿಕೋತ್ಸವ: ಸಾಧಕರ ಖುಷಿ; ಪೋಷಕರ‌ ಹೆಮ್ಮೆ!

44 ಅಭ್ಯರ್ಥಿಗಳಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 16:28 IST
Last Updated 4 ಜುಲೈ 2023, 16:28 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕಕ್ಕೆ ಭಾಜನರಾದ ಅಭ್ಯರ್ಥಿಗಳು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕಕ್ಕೆ ಭಾಜನರಾದ ಅಭ್ಯರ್ಥಿಗಳು    

ಕೋಲಾರ: ರ‍್ಯಾಂಕ್‌ ಪಡೆದ ಅಭ್ಯರ್ಥಿಗಳಲ್ಲಿ ಮಂಗಳವಾರ ಸಾಧನೆಯ ಸಂಭ್ರಮ, ಸಂತೃಪ್ತಿಯ ಕ್ಷಣ. ಚಿನ್ನದ ಪದಕಕ್ಕೆ ಭಾಜನರಾದವರು ಆನಂದದ ಅಲೆಯಲ್ಲಿ ತೇಲುತ್ತಿದ್ದರೆ, ಪೋಷಕರಲ್ಲಿ ಸಮಾಧಾನದ ಭಾವ. ಜೊತೆಗೆ ಕರತಾಡನ ಹಾಗೂ ಅಭಿನಂದನೆಗಳ ಸುರಿಮಳೆ. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಂದ ಶಹಬ್ಬಾಶ್‌ ಎನಿಸಿಕೊಂಡ ಖುಷಿ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೂರನೇ ವಾರ್ಷಿಕ ಘಟಿಕೋತ್ಸವದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ 44 ಅಭ್ಯರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾದರು. 20,324 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ತಮ್ಮ ಓದಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕ ಸಾರ್ಥಕ ಭಾವದಲ್ಲಿ ಸಾಧಕರಿದ್ದರು. ತಮ್ಮ ಸಾಧನೆಯನ್ನು ಅಭಿನಂದಿಸಲು ಬಂದವರಿಗೆ ನಗೆಯ ಉಡುಗೊರೆ ನೀಡುತ್ತಿದ್ದರು. ಮುಂದಿನ ಗುರಿಯ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು.‌ ಪೋಷಕರು, ಗೆಳೆಯರೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಡುತ್ತಿದ್ದ ಅಭ್ಯರ್ಥಿಗಳ ಕಂಗಳಲ್ಲಿ ನೂರಾರು ಕನಸು.

ADVERTISEMENT

8,252 ಪುರುಷರು ಹಾಗೂ 12,072 ಮಹಿಳೆಯರು ಪದವಿ ಸ್ವೀಕರಿಸಿದರು. ಸ್ನಾತಕ, ಬಿ.ಇಡಿ, ಬಿಪಿ.ಇಡಿ ಪದವಿಯಲ್ಲಿ 16 ಮಂದಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 28 ಮಂದಿ ಅಭ್ಯರ್ಥಿಗೆ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಿದರು. ಸ್ನಾತಕ ಪದವಿಯಲ್ಲಿ 10 ಮಂದಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 22 ಮಂದಿ ಸೇರಿ 32 ಯುವತಿಯರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಉಳಿದಂತೆ ಸ್ನಾತಕದಲ್ಲಿ 6 ಮತ್ತು ಸ್ನಾತಕೋತ್ತರದಲ್ಲಿ 6 ಸೇರಿ 12 ಮಂದಿ ಯುವಕರು ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ.

‘ತುಂಬಾ ಖುಷಿಯಾಗಿದೆ. ಪರಿಶ್ರಮಕ್ಕೆ ಫಲ ಸಿಕ್ಕಿದೆ. ಮುಂದೆ ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆ ನಡೆಸುತ್ತೇನೆ’ ಎಂದು ಎಂ.ಎ ಇತಿಹಾಸದಲ್ಲಿ ಮೊದಲ ರ‍್ಯಾಂಕ್‌ ಪಡೆದ ಎಸ್‌.ರೋಜಾ ತಿಳಿಸಿದರು.

ಚಿಂತಾಮಣಿ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಓದಿರುವ ಅವರು ಪತಿ ಹಾಗೂ ತಾಯಿ ಜೊತೆ ಬಂದಿದ್ದರು. ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದಾರೆ.

‘ಹೆಣ್ಣು ಮಕ್ಕಳು ಓದುವುದಕ್ಕೆ ಕುಟುಂಬದಲ್ಲಿ ವಿರೋಧ ಇತ್ತು. ಆದರೆ, ತಂದೆ, ತಾಯಿ ನನ್ನ ಓದಿಗೆ ಸಹಕರಿಸಿದರು. ಹೀಗಾಗಿ, ಈ ಹಂತಕ್ಕೆ ಏರಲು ಸಾಧ್ಯವಾಗಿದೆ’ ಎಂದರು.

ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಜನರು
ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ರೋಜಾ (ಎಂ.ಎ ಇತಿಹಾಸ) ಅವರು ತಾಯಿ ಹಾಗೂ ಪತಿ ಜೊತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.