
ಬಂಗಾರಪೇಟೆ: ತಾಲ್ಲೂಕಿನ ರೈತರು ಒಂದೆಡೆ ಬೇಸಿಗೆ ಬೆಳೆ ನಂಬಿ ಕಷ್ಟಪಡುತ್ತಿದ್ದರೆ, ಮತ್ತೊಂದೆಡೆ ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರನ್ನು ಆರ್ಥಿಕವಾಗಿ ಹೈರಾಣು ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.
ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿದ್ದರೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಯೂರಿಯಾವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕವಾಗಿ ವಂಚಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ತೊಪ್ಪನಹಳ್ಳಿ ಗ್ರಾಮದಲ್ಲಿ ಮಳಿಗೆಯೊಂದಲ್ಲಿ 45 ಕೆ.ಜಿ ತೂಕದ ಯೂರಿಯಾ ಮೂಟೆಯನ್ನು ಬರೋಬ್ಬರಿ ₹ 450ಕ್ಕೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ನಿಯಮದಂತೆ ಸಾಗಣೆ ವೆಚ್ಚ ಸೇರಿ ಗರಿಷ್ಠ ₹ 300 ಇರಬೇಕಾದ ಗೊಬ್ಬರಕ್ಕೆ ಹೆಚ್ಚುವರಿ ₹ 150 ವಸೂಲಿ ಮಾಡಲಾಗುತ್ತಿದೆ ಎಂದು ರೈತರು ದೂರಿದ್ದಾರೆ.
ತಾಲ್ಲೂಕಿನ ಕಾಮಸಮುದ್ರದಲ್ಲಿರುವ ಮಳಿಗೆಯೊಂದರಲ್ಲಿ ಯೂರಿಯಾ ಬೇಕೆಂದರೆ ರಾಸುಗಳ ಬೂಸವನ್ನು ಕಡ್ಡಾಯವಾಗಿ ಖರೀದಿಸಲೇಬೇಕು ಎಂಬ ಷರತ್ತು ವಿಧಿಸಲಾಗಿದೆ. ಇದರಿಂದ ರೈತರು ಬೇಡದಿದ್ದರೂ ಪಶು ಆಹಾರಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ತಾಲ್ಲೂಕಿನಲ್ಲಿ ಯೂರಿಯಾ ಪೂರೈಕೆ ಕೊಂಚ ಕುಂಠಿತವಾಗಿರುವುದನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯಾಪಾರಿಗಳು, ರೈತರ ಅಸಹಾಯಕತೆಯನ್ನು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ.
ಪ್ರಸ್ತುತ ಬೇಸಿಗೆ ರಾಗಿ, ಜೋಳ ಹಾಗೂ ಫಾರಂ ಹುಲ್ಲು ಬೆಳೆದಿರುವ ರೈತರಿಗೆ ಈ ಹಂತದಲ್ಲಿ ಯೂರಿಯಾ ಅತ್ಯಗತ್ಯವಾಗಿದೆ. ತಾಲ್ಲೂಕಿನಲ್ಲಿ ಯೂರಿಯಾ ಬೆಲೆ ಹೆಚ್ಚಾದ ಕಾರಣ ಗಡಿ ಭಾಗದ ರೈತರು ಅನಿವಾರ್ಯವಾಗಿ ತಮಿಳುನಾಡಿಗೆ ತೆರಳಿ ₹ 350 ನೀಡಿ ಗೊಬ್ಬರ ತರುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಕೃಷಿ ಇಲಾಖೆಯ ಮೇಲಿನ ನಂಬಿಕೆಯನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ.
ರೈತರ ಹೆಸರಿನಲ್ಲಿ ಸಬ್ಸಿಡಿ ಪಡೆಯುವ ಕಂಪನಿಗಳು ಮತ್ತು ಮಾರಾಟಗಾರರು ರೈತರನ್ನೇ ಶೋಷಿಸುತ್ತಿರುವುದು ಖಂಡನೀಯ. ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ
–ಅಪ್ಪೋಜಿರಾವ್ ತಾಲ್ಲೂಕು ಅಧ್ಯಕ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
–––
ನಮಗೆ ಬೇಕಿರುವುದು ಯೂರಿಯಾ ಮಾತ್ರ. ದನಗಳ ಬೂಸವನ್ನು ನಾವು ಬೇರೆ ಕಡೆ ಕೊಳ್ಳುತ್ತೇವೆ. ಬೂಸವನ್ನು ಖರೀದಿಸಿದರೆ ಮಾತ್ರ ಗೊಬ್ಬರ ಕೊಡುತ್ತೇವೆ ಎನ್ನುವುದು ಯಾವ ನ್ಯಾಯ? ಇದು ರೈತರಿಗೆ ಮಾಡುತ್ತಿರುವ ದ್ರೋಹ
–ವಿಜಯ ಕುಮಾರ್ ರೈತ ಪೋಲೇನಹಳ್ಳಿ ಗ್ರಾಮ
–––
ಯೂರಿಯಾ ಕಂಪನಿಗಳು ಕಾಂಪ್ಲೆಕ್ಸ್ ಗೊಬ್ಬರ ಪಡೆದರೆ ಮಾತ್ರ ಯೂರಿಯಾ ನೀಡುವುದಾಗಿ ಷರತ್ತು ವಿಧಿಸಿವೆ. ಹೀಗಾಗಿ ಅಂಗಡಿ ಮಾಲೀಕರು ಯೂರಿಯಾ ಜೊತೆಗೆ 5 ಕೆ.ಜಿ ಕಾಂಪ್ಲೆಕ್ಸ್ ನೀಡುತ್ತಿರುವುದರಿಂದ ₹ 450 ಪಡೆಯುತ್ತಿದ್ದಾರೆ
–ಬಿ.ಎನ್.ವಿಜಯ್ ಕುಮಾರ್ ಸಹಾಯಕ ಕೃಷಿ ಅಧಿಕಾರಿ ಬಂಗಾರಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.