ADVERTISEMENT

ನ್ಯಾಯಬೆಲೆ ಅಂಗಡಿ: ಕಮಿಷನ್‌ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 2:50 IST
Last Updated 9 ಜುಲೈ 2025, 2:50 IST
ಬಂಗಾರಪೇಟೆ ತಾಲ್ಲೂಕಿನ ದೇಶಿಹಳ್ಳಿ ನ್ಯಾಯಬೆಲೆ ಅಂಗಡಿ
ಬಂಗಾರಪೇಟೆ ತಾಲ್ಲೂಕಿನ ದೇಶಿಹಳ್ಳಿ ನ್ಯಾಯಬೆಲೆ ಅಂಗಡಿ   

ಬಂಗಾರಪೇಟೆ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಅನುಷ್ಠಾನದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳ ಬೆನ್ನಲ್ಲೇ, ಪಡಿತರ ಅಕ್ಕಿ ಸಾಗಾಟ ಮಾಡುವ ಲಾರಿ ಮಾಲೀಕರಿಗೆ ಐದು ತಿಂಗಳಿನಿಂದ ಹಣ ಮಾಡದ ಕಾರಣ ಲಾರಿ ಮಾಲೀಕರ ಸಂಘವು ರಾಜ್ಯದಾದ್ಯಂತ ಮುಷ್ಕರ ಆರಂಭಿಸುವುದಾಗಿ ಘೋಷಿಸಿದ್ದಾರೆ. 

ಇದರ ಬೆನ್ನಲ್ಲೇ, ಇದೇ ರೀತಿ ನಾಲ್ಕು ತಿಂಗಳಿನಿಂದ ಜನಸಾಮಾನ್ಯರಿಗೆ ಪಡಿತರ ವಿತರಣೆ ಮಾಡುವ ತಮಗೆ ನಾಲ್ಕು ತಿಂಗಳಿನಿಂದ ಸರ್ಕಾರವು ಕಮಿಷನ್ ವಿತರಣೆ ಮಾಡಿಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರವು ಪ್ರತಿ ತಿಂಗಳು ಕಮಿಷನ್ ವಿತರಣೆ ಮಾಡದೆ, 6 ತಿಂಗಳಿಗೊಮ್ಮೆ ಪಾವತಿ ಮಾಡಲಾಗುತ್ತಿದೆ. ಇದರಿಂದ ನ್ಯಾಯಬೆಲೆ ಅಂಗಡಿ ನಿರ್ವಹಣೆ ಮಾಡುವವರು ಪರದಾಡುವಂತಾಗಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಅವಲತ್ತುಕೊಂಡಿದ್ದಾರೆ. 

ಕೆಲವು ಅಂಗಡಿ ಮಾಲೀಕರ ಜೀವನವು ಸರ್ಕಾರ ನೀಡುವ ಕಮಿಷನ್ ಹಣದ ಮೇಲೆಯೇ ನಿಂತಿದೆ. ನಾಲ್ಕು ತಿಂಗಳಿನಿಂದ ಕಮಿಷನ್ ವಿತರಣೆ ಮಾಡದ ಕಾರಣ ನ್ಯಾಯಬೆಲೆ ಅಂಗಡಿಗಳನ್ನು ನಡೆಸಲು ಕಷ್ಟವಾಗುತ್ತಿದೆ ಎಂದು ಮಾಲೀಕರು ದೂರಿದ್ದಾರೆ. 

ADVERTISEMENT

ಸರ್ಕಾರವು ತಮಗೆ ನೀಡಬೇಕಾದ ಕಮಿಷನ್ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ ಎಂಬುದು ಮೊದಲಿನಿಂದಲೂ ವಿರೋಧ ಪಕ್ಷಗಳ ಆರೋಪವಾಗಿತ್ತು. ಈಗ ನಾಲ್ಕು ತಿಂಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ನೀಡದಿರುವುದು, ವಿಪಕ್ಷಗಳ ಆರೋಪ ಸತ್ಯ ಎಂಬಂತಾಗಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ ಆರೋಪ. 

ಸರ್ಕಾರವು ಪಡಿತರ ಚೀಟಿ ಸದಸ್ಯರಿಗೆ ತಲಾ 7 ಕೆ.ಜಿ ಅಕ್ಕಿ, 3 ಕೆ.ಜಿ ರಾಗಿ ನೀಡುತ್ತದೆ. ಇದನ್ನು ಎತ್ತುವಳಿ ಮಾಡಿ ಪಡಿತರ ಚೀಟಿದಾರರಿಗೆ ನೀಡಬೇಕು. ಈ ಎಲ್ಲ ಕೆಲಸ ಮಾಡಲು ಕೂಲಿ ಕಾರ್ಮಿಕರು, ಅಂಗಡಿ ಬಾಡಿಗೆ, ವಿದ್ಯುತ್ ಸೇರಿ ಇತರ ವೆಚ್ಚಗಳನ್ನು ಪ್ರತಿ ತಿಂಗಳು ಅಂಗಡಿ ಮಾಲೀಕರೇ ಭರಿಸಿಕೊಳ್ಳಬೇಕು. ಆದರೆ, ನಾಲ್ಕು ತಿಂಗಳಿನಿಂದ ಕಮಿಷನ್ ಹಣ ಸಿಗದ ಕಾರಣ, ಸಾಲ ಮಾಡಿ ಅಂಗಡಿ ನಡೆಸುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಚಿಸದ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.