ADVERTISEMENT

ಒತ್ತುವರಿ ತೆರವಿಗೆ ನಾಲ್ಕು ದಿನ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 3:22 IST
Last Updated 12 ಜುಲೈ 2025, 3:22 IST
ಬಂಗಾರಪೇಟೆ ಕೆರೆಕೋಡಿ ಗ್ರಾಮದಿಂದ ತಮ್ಮೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸವ ರಸ್ತೆ ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳು 
ಬಂಗಾರಪೇಟೆ ಕೆರೆಕೋಡಿ ಗ್ರಾಮದಿಂದ ತಮ್ಮೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸವ ರಸ್ತೆ ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳು    

ಬಂಗಾರಪೇಟೆ: ಇಲ್ಲಿನ ಕೆರೆಕೋಡಿ ವಾರ್ಡ್‌ನಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಮನೆಗಳ ತೆರವಿಗೆ ತಹಶೀಲ್ದಾರ್ ಎಸ್. ವೆಂಕಟೇಶಪ್ಪ ನಾಲ್ಕು ದಿನ ಕಾಲಾವಕಾಶ ನೀಡಿದ್ದಾರೆ. 

ಕೆರೆಕೋಡಿ ಗ್ರಾಮದಿಂದ ತಮ್ಮೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 20 ಅಡಿ ಅಗಲದ ರಸ್ತೆಯನ್ನು ಗ್ರಾಮಸ್ಥರು ಒತ್ತುವರಿ ಮಾಡಿಕೊಂಡು, ಮನೆ ಕಟ್ಟಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಕುರಿತು ಕೃಷ್ಣಮೂರ್ತಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ, ಸ್ಥಳಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ಅಧಿಕಾರಿಗಳು, ಸರ್ವೆ ಕಾರ್ಯ ನಡೆಸಿ, ಒತ್ತುವರಿಯಾಗಿದ್ದರೆ, ತೆರವುಗೊಳಿಸಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದ್ದರು. 

ಈ ಪ್ರಕಾರ, ಕಂದಾಯ ಇಲಾಖೆ ಸರ್ವೆ ನಡೆಸಿದ್ದು, ಬಂಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ಕಾಂಪೌಂಡ್ ನಿರ್ಮಿಸಿಕೊಂಡಿರುವುದು ಸಾಬೀತಾಗಿದೆ. ಒತ್ತುವರಿ ತೆರವುಗೊಳಿಸಲು ಒತ್ತುವರಿದಾರರಿಗೆ ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಒತ್ತುವರಿ ತೆರವುಗೊಳಿಸದ ಕಾರಣ, ತಹಶೀಲ್ದಾರ್ ವೆಂಕಟೇಶಪ್, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಅವರು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆಗೆ ಗುರುವಾರ ಬಂದರು. 

ADVERTISEMENT

ಮಣ್ಣು ತೆಗೆಯುವ ಯಂತ್ರ (ಜೆಸಿಬಿ)ದಿಂದ ಒತ್ತುವರಿ ತೆರವು ಮಾಡಿದರೆ, ಮನೆಗಳಿಗೆ ಹಾನಿಯಾಗುತ್ತದೆ. ಹೀಗಾಗಿ, ಒತ್ತುವರಿ ತೆರವಿಗೆ ಕಾಲಾವಕಾಶ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಹೀಗಾಗಿ, ಒತ್ತುವರಿ ತೆರವಿಗೆ ನಾಲ್ಕು ದಿನ ಕಾಲಾವಕಾಶ ನೀಡಲಾಗಿದೆ. 

ಈ ವೇಳೆ ಪುರಸಭೆ ಮುಖಾಧಿಕಾರಿ ಸತ್ಯನಾರಾಯಣ, ಜೆಇ ರವಿ, ರಾಜಸ್ವ ನಿರೀಕ್ಷಕ ಅಜಯ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಬಂಗಾರಪೇಟೆ ಕೆರೆಕೋಡಿ ಗ್ರಾಮದಿಂದ ತಮ್ಮೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸವ ರಸ್ತೆಯ ಒತ್ತುವರಿಯನ್ನು ತೆರವುಗೊಳಿಸಿದ ಅಧಿಕಾರಿಗಳು
ಬಂಗಾರಪೇಟೆ ಕೆರೆಕೋಡಿ ಗ್ರಾಮದಿಂದ ತಮ್ಮೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸವ ರಸ್ತೆಯ ಒತ್ತುವರಿಯನ್ನು ತೆರವುಗೊಳಿಸಿದ ಅಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.