
ಬಂಗಾರಪೇಟೆ: ಅಧಿಕೃತ ಪತ್ರ ಬರಹಗಾರರ ಬದಲಿಗೆ, ಕಂಪ್ಯೂಟರ್ ಸೆಂಟರ್‌ಗಳು ಅಥವಾ ಅನಧಿಕೃತ ವ್ಯಕ್ತಿಗಳು ಕಡಿಮೆ ಜ್ಞಾನದೊಂದಿಗೆ ಕೆಲಸ ನಿರ್ವಹಿಸಲು ಶುರು ಮಾಡಿದರೆ ವೃತ್ತಿಪರ ಬರಹಗಾರರು ಬೀದಿಗೆ ಬರಬೇಕಾಗುತ್ತದೆ ಎಂದು ತಾಲ್ಲೂಕು ಪತ್ರಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಸಿ ಶಿವಮೂರ್ತಿ ಕಳವಳ ವ್ಯಕ್ತಪಡಿಸಿದರು.
ನಗರದ ಉಪ ನೋಂದಣಿ ಕಚೇರಿ ಮುಂದೆ ಶನಿವಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲೇಖನಿ ಸ್ಥಗಿತ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ಕಾರ ಆನ್‌ಲೈನ್ ಮೂಲಕ ನೇರವಾಗಿ ಸಾರ್ವಜನಿಕರೇ ದಸ್ತಾವೇಜು ಸಿದ್ಧಪಡಿಸಲು ಅವಕಾಶ ನೀಡುತ್ತಿರುವುದರಿಂದ ಪರವಾನಗಿ ಪಡೆದ ಸಾವಿರಾರು ಬರಹಗಾರರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ನೋಂದಣಿಯಾಗುವ ಪ್ರತಿಯೊಂದು ದಾಖಲೆಯಲ್ಲಿ ದಸ್ತು ಬರಹಗಾರರ ಸಹಿ ಮತ್ತು ಪರವಾನಗಿ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಬೇಕು. ಇದರಿಂದ ದಾಖಲೆಗಳ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಪತ್ರ ಬರಹಗಾರರು ದಸ್ತಾವೇಜು ಬರೆದಾಗ ಅದರಲ್ಲಿ ಅವರ ಪರವಾನಗಿ ಸಂಖ್ಯೆ ಇರುತ್ತದೆ. ಅಂದರೆ ಆ ದಾಖಲೆ ಕಾನೂನುಬದ್ಧತೆಗೆ ಅವರೂ ಒಂದು ರೀತಿ ಹೊಣೆಗಾರರಾಗಿರುತ್ತಾರೆ. ಕಾವೇರಿ-3ನಲ್ಲಿ ಯಾರು ಬೇಕಾದರೂ ದಾಖಲೆ ಸೃಷ್ಟಿಸಬಹುದಾದರೆ ತಪ್ಪಾದಾಗ ಯಾರನ್ನು ಹೊಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, ಕಾವೇರಿ-2 ಮತ್ತು ಕಾವೇರಿ-3 ತಂತ್ರಾಂಶಗಳಲ್ಲಿ ಸಾರ್ವಜನಿಕರಿಗೆ ನೀಡುವಂತೆ ದಸ್ತು ಬರಹಗಾರರಿಗೂ ಪ್ರತ್ಯೇಕ 'ಡೀಡ್ ರೈಟರ್ ಲಾಗಿನ್' ನೀಡಬೇಕು. ನೋಂದಣಿಯಾಗುವ ಎಲ್ಲ ದಸ್ತಾವೇಜುಗಳಲ್ಲಿ ಅಧಿಕೃತ ಪತ್ರ ಬರಹಗಾರರ ಅಥವಾ ವಕೀಲರ ಸಹಿ (ಬಿಕ್ಕಲಂ) ಕಡ್ಡಾಯಗೊಳಿಸಬೇಕು. ಸೈಬರ್ ಕೆಫೆ ಹಾಗೂ ಇತರ ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ಸಿದ್ಧಪಡಿಸುವುದನ್ನು ತಡೆಗಟ್ಟಬೇಕು. ಕಾಲಕ್ಕೆ ತಕ್ಕಂತೆ ಪತ್ರ ಬರಹಗಾರರ ಸೇವಾ ಶುಲ್ಕ ಹೆಚ್ಚಿಸಬೇಕು. ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಈ.ಶ್ರೀನಿವಾಸ್, ಫಣೀಂದ್ರ, ರವಿ ಕುಮಾರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.