ಬಂಗಾರಪೇಟೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿರಹಿತರಿಗೆ ವಸತಿ ಯೋಜನೆಯಡಿ ಸೂರು ಕಲ್ಪಿಸುವ ನಿಟ್ಟಿನಲ್ಲಿ ಐದು ವರ್ಷಗಳ ಹಿಂದೆಯೇ ರಾಮಕೃಷ್ಣ ಹೆಗಡೆ ಕಾಲೊನಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಈ ಕಟ್ಟಡಗಳು ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.
ಪಟ್ಟಣದಲ್ಲಿರುವ ವಸತಿ ರಹಿತರು ಮತ್ತು ಗುಡಿಸಲಿನಲ್ಲಿರುವವರಿಗೆ ವಸತಿ ಯೋಜನೆಯಡಿ ಮನೆ ಹಂಚಿಕೆ ಮಾಡುವುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಎಂಟು ವರ್ಷಗಳ ಹಿಂದೆಯೇ ಭರವಸೆ ನೀಡಿದ್ದರು. ಈ ಪ್ರಕಾರ ಐದು ವರ್ಷಗಳ ಹಿಂದೆ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆಯನ್ನೂ ನೀಡಲಾಗಿತ್ತು.
ಪಟ್ಟಣದ ರಾಮಕೃಷ್ಣ ಹೆಗಡೆ ಕಾಲೊನಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಮನೆಗಳನ್ನು ಹಂಚಿಕೆ ಮಾಡಲು 100 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಈ ಯೋಜನೆಯಡಿ ನಿರ್ಮಿಸಲಾಗುವ ಒಂದು ವಸತಿಗೆ ಒಟ್ಟಾರೆ ಸುಮಾರು 5 ಲಕ್ಷ ವೆಚ್ಚವಾಗುತ್ತದೆ. ಈ ಪೈಕಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ₹4.25 ಲಕ್ಷ ಭರಿಸಲಾಗುತ್ತದೆ. ಉಳಿದ ಸುಮಾರು ₹60 ಸಾವಿರವನ್ನು ಫಲಾನುಭವಿಗಳೇ ಭರಿಸಿಕೊಳ್ಳಬೇಕು. ಆದರೆ, ಫಲಾನುಭವಿಗಳು ಕೇವಲ ₹5,000 ಮಾತ್ರ ಪಾವತಿ ಮಾಡಿದ್ದಾರೆ. ಇದರಿಂದಾಗಿ ಈ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಒಂದು ಹಂತಕ್ಕೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಈ ಗುಂಪು ಮನೆಗಳಿಗೆ ಹೋಗಲು ಸಮರ್ಪಕ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ. ಬೀದಿದೀಪಗಳು ಇಲ್ಲ. ಗುಂಪು ಮನೆಗಳ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿಯೂ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವ ವಿಚಾರದಲ್ಲಿ ನಿರಾಸಕ್ತಿ ತೋರುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.
ಕಾಮಗಾರಿ ಸ್ಥಗಿತಗೊಂಡಿರುವುದರಿಂದ, ಜನರು ತೊಂದರೆ ಅನುಭವಿಸುವಂತಾಗಿದೆ. ವಸತಿ ವಿತರಣೆಗಾಗಿ ಫಲಾನುಭವಿಗಳಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಬೀದಿಬದಿ ವ್ಯಾಪಾರಿ ಹುಸೇನ್ ಎಂಬವರು ಹೇಳುತ್ತಾರೆ.
ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗಳ ಕಾಮಗಾರಿಗೆ ಫಲಾನುಭವಿಗಳೇ ₹60 ನೀಡಬೇಕು. ಬಾಕಿ ₹4.25 ಲಕ್ಷ ಕೊಳಗೇರಿ ಅಭಿವೃದ್ಧಿ ಮಂಡಳಿ ಭರಿಸಲಿದೆ. ಆದರೆ, ಫಲಾನುಭವಿಗಳು ವಂತಿಗೆ ನೀಡದ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿ ಸುಹೇಲ್ ಹೇಳುತ್ತಾರೆ.
ಕೊಳಗೇರಿಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗ ದುರ್ಬಲ ವರ್ಗಗವರಿಗೆ ನೀಡಲು ಉದ್ದೇಶಿಸಿರುವ ವಸತಿಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಕು.ಸತೀಶ್ ಕೊಳಗೇರಿ ಪ್ರದೇಶದ ನಿವಾಸಿ
ಸ್ವಂತ ಮನೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ಜನರ ಕನಸು ಭಗ್ನವಾಗಿದೆ. ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ವಸತಿಗಳಿಗಾಗಿ ಪ್ರತಿನಿತ್ಯ ಪುರಸಭೆಗೆ ಅಲೆದಾಡುವಂತಾಗಿದೆ. ಹುಣಸನಹಳ್ಳಿ ಎನ್. ವೆಂಕಟೇಶ್ ದಲಿತ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷಹುಣಸನಹಳ್ಳಿ ಎನ್. ವೆಂಕಟೇಶ್ , ದಲಿತ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ
ಬಡವರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರವೇ ಮುಗಿಸುವಂತೆ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಪತ್ರ ಬರೆಯಲಾಗುವುದು.ಸತ್ಯ ನಾರಾಯಣ, ಮುಖ್ಯಾಧಿಕಾರಿ
ಪುಂಡರ ಅಡ್ಡೆಯಾದ ಮನೆಗಳು ಬಡವರಿಗೆ ನೀಡುವ ಸದುದ್ದೇಶದಿಂದ ಪ್ರಧಾನಿ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಗುಂಪುಗಳ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತ ಕಾರಣ ಈ ಮನೆಗಳು ರಾತ್ರಿ ಹೊತ್ತು ಪುಂಡ ಪೋಕರಿಗಳ ಅಡ್ಡೆಯಾಗಿ ಪರಿವರ್ತಿತವಾಗಿದೆ. ಇಲ್ಲಿ ಪ್ರತಿನಿತ್ಯವೂ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ರಾತ್ರಿ ಹೊತ್ತು ಕುಡುಕರು ಮದ್ಯಪಾನ ಮಾಡುತ್ತಾರೆ. ಕುಡಿದು ಮದ್ಯದ ಕಾಲಿ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಇದರಿಂದ ವಾತಾವರಣವು ಕಲುಷಿತಗೊಂಡಿದೆ. ಮನೆಗಳ ಸುತ್ತಲೂ ಬೇಲಿ ಹಾಕದ ಕಾರಣ ಈ ಪ್ರದೇಶವು ಪಾಳು ಬಿದ್ದಿದೆ. ಇದರಿಂದಾಗಿ ಈ ವಸತಿಗಳಿಗೆ ಹಣ ಪಾವತಿ ಮಾಡಲು ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.