
ಬಂಗಾರಪೇಟೆ ತಾಲ್ಲೂಕಿನ ಕನಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ನಿರ್ಮಿಸಿರುವ ಪೌಷ್ಟಿಕ ತೋಟದ ಕಾಮಗಾರಿಯನ್ನು ಇಒ ಮತ್ತು ಪಿಡಿಒ ವೀಕ್ಷಿಸಿದರು
ಬಂಗಾರಪೇಟೆ: ಸರ್ಕಾರಿ ಶಾಲಾ ಮಕ್ಕಳ ಆರೋಗ್ಯ ಸುಧಾರಣೆ ಮತ್ತು ಶಾಲಾ ಆವರಣವನ್ನು ಹಸಿರುಮಯವಾಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಂಜಿನರೇಗಾ) ಯೋಜನೆಯಡಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ‘ಪೌಷ್ಟಿಕ ತೋಟ’ ನಿರ್ಮಾಣಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ.
ತಾಲ್ಲೂಕಿನಾದ್ಯಂತ 2025–2026 ಸಾಲಿನಲ್ಲಿ 12 ಶಾಲೆಗಳು ಹಾಗೂ ಐದು ವಿದ್ಯಾರ್ಥಿ ನಿಲಯಗಳಲ್ಲಿ ಪೌಷ್ಟಿಕ ತೋಟ (ಧನ್ವಂತರಿ ವನ) ನಿರ್ಮಾಣಕ್ಕೆ ಸರ್ಕಾರ ಕ್ರಿಯಾಯೋಜನೆ ರೂಪಿಸಿದ್ದು, ಪ್ರತಿ ಶಾಲೆಗೆ ಅಂದಾಜು ವೆಚ್ಚ ₹17,424 ಮಂಜೂರು ಮಾಡಿದೆ. ಈ ಪೌಷ್ಟಿಕ ತೋಟವು ಮಧ್ಯಾಹ್ನದ ಬಿಸಿಯೂಟದಲ್ಲಿ ಪೌಷ್ಟಿಕಾಂಶದ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಿದೆ.
ಮಾರುಕಟ್ಟೆಯಿಂದ ತರಕಾರಿ ಖರೀದಿಸುವ ಬದಲು ಶಾಲಾ ಆವರಣದಲ್ಲೇ ಬೆಳೆದ ವಿಷಮುಕ್ತ ಮತ್ತು ತಾಜಾ ತರಕಾರಿಗಳನ್ನು ಮಕ್ಕಳಿಗೆ ಉಣ ಬಡಿಸುವುದು ಈ ಯೋಜನೆಯ ಮುಖ್ಯ ಗುರಿ. ನುಗ್ಗೆಕಾಯಿ, ಪಪ್ಪಾಯಿ, ಕರಿಬೇವು, ಲಕ್ಷ್ಮಣ ಫಲ, ನೇರಳ, ಸೀಬೆ, ನಿಂಬೆ ಸೇರಿದಂತೆ ವಿವಿಧ ಸೊಪ್ಪು ಮತ್ತು ಬಸಳೆ, ದೊಡ್ಡಪತ್ರೆ, ಅಮೃತಬಳ್ಳಿ, ತುಳಸಿ, ಲೋಳೆಸರ, ಮಂಗರವಲ್ಲಿ, ಒಂದೆಲಗ, ಹೊನಗೊನ್ನೆ, ಇನ್ಸುಲಿನ್, ದಾಸವಾಳ ಹಾಗೂ ತರಕಾರಿಗಳನ್ನು ಬೆಳೆಯಲು ಕ್ರಿಯಾಯೋಜನೆ ರೂಪಿಸಲಾಗಿದೆ. ಈಗಾಗಲೇ ಹುದುಕುಳ, ಬಲಮಂದೆ ಸರ್ಕಾರಿ ಪ್ರೌಢಶಾಲೆ, ಬೂದಿಕೋಟೆ ಕರ್ನಾಟಕ ಪಬ್ಲಿಕ್ ಶಾಲೆ, ಕನಮನಹಳ್ಳಿ, ಎಸ್ ಮಾದಮಂಗಲ, ದಾಸರಹೊಸಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ಶಿವಲಿಂಗ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೌಷ್ಟಿಕ ತೋಟ ಅಥವಾ ಧನ್ವಂತರಿ ವನ ನಿರ್ಮಿಸಲಾಗಿದೆ.
ಮುಂದಿನ ದಿನಗಳಲ್ಲಿ ಸ್ಥಳಾವಕಾಶ ಇರುವ ಪ್ರತಿಯೊಂದು ಶಾಲೆಯಲ್ಲೂ ಪೌಷ್ಟಿಕ ತೋಟ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಿವಕುಮಾರಿ ಮಾಹಿತಿ ನೀಡಿದರು.
ಮಕ್ಕಳನ್ನು ಕೇವಲ ಪುಸ್ತಕಕ್ಕೆ ಸೀಮಿತಗೊಳಿಸದೆ ಮಣ್ಣಿನೊಂದಿಗೆ ಬೆರೆತು ಗಿಡಗಳನ್ನು ಬೆಳೆಸುವ ಕಲೆಯನ್ನೂ ಕಲಿಸಲಾಗುತ್ತಿದೆ. ಇದು ಅವರಲ್ಲಿ ಪರಿಸರ ಪ್ರಜ್ಞೆ ಮೂಡಿಸುತ್ತದೆ ಎಂದು ಬಲಮಂದೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗಿರಿಯಪ್ಪ ತಿಳಿಸಿದರು.
ಧನ್ವಂತರಿ ವನ ಎಂದರೆ ಕೇವಲ ಗಿಡಗಳನ್ನು ಬೆಳೆಸುವುದಷ್ಟೇ ಅಲ್ಲ. ಅದು ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಜೀವನ ಶೈಲಿ ಪರಿಚಯಿಸುವ ಒಂದು ದಾರಿಯಾಗಿದೆ. ಧನ್ವಂತರಿ ವನದಲ್ಲಿ ಬೆಳೆಸುವ ತುಳಸಿ, ದೊಡ್ಡಪತ್ರೆ, ನೆಲ್ಲಿಕಾಯಿಯಂತಹ ಗಿಡಗಳ ಮೂಲಕ ಮಕ್ಕಳಿಗೆ ನಮ್ಮ ದೇಶದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಮತ್ತು ಪ್ರಾಥಮಿಕ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಬಲಮಂದೆ ಪಿಡಿಒ ಮಧುಚಂದ್ರ ತಿಳಿಸಿದರು.
ಗ್ರಾಮ ಪಂಚಾಯಿತಿಗಳ ನೆರವು
ಈ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಮೂಲಕ ಶಾಲಾ ಆವರಣದಲ್ಲಿ ಭೂಮಿ ಹದಗೊಳಿಸುವುದು ಗಿಡಗಳ ಸಂರಕ್ಷಣೆಗಾಗಿ ತಂತಿ ಬೇಲಿ ಅಥವಾ ಹಸಿರು ಬೇಲಿ ನಿರ್ಮಾಣ ಇಂಗುಗುಂಡಿ ಹಾಗೂ ಶಾಲೆ ನಳದ ನೀರು ಅಥವಾ ಮಳೆ ನೀರು ವ್ಯರ್ಥವಾಗದಂತೆ ಇಂಗುಗುಂಡಿಗಳನ್ನು ನಿರ್ಮಿಸಿ ತೋಟಕ್ಕೆ ಹರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಶಾಲೆಯ ಅಡುಗೆ ಮನೆಯ ತ್ಯಾಜ್ಯದಿಂದ ಗೊಬ್ಬರ ತಯಾರಿಸಲು ಪ್ರತ್ಯೇಕ ಗುಂಡಿಗಳನ್ನು ನಿರ್ಮಿಸುವ ಮೂಲಕ ಸಾವಯವ ಗೊಬ್ಬರ ತಯಾರಿಕಾ ಘಟಕಗಳನ್ನು ನಿರ್ಮಿಸಿಕೊಡಲಾಗುತ್ತದೆ. ಕೆಲಸ ಮಾಡುವ ಸ್ಥಳೀಯ ಕೂಲಿಕಾರರಿಗೆ ನರೇಗಾ ಅಡಿ ವೇತನ ಪಾವತಿಯಾಗಲಿದ್ದು ಶಾಲಾ ಅಭಿವೃದ್ಧಿ ಜೊತೆಗೆ ಸ್ಥಳೀಯರಿಗೆ ಉದ್ಯೋಗ ದೊರೆತಂತಾಗುತ್ತದೆ
ಮಕ್ಕಳ ಪಾಲಿಗೆ ಪ್ರಯೋಗಾಲಯ
ಈ ತೋಟಗಳು ಕೇವಲ ತರಕಾರಿ ನೀಡುವ ಜಾಗಗಳಷ್ಟೇ ಅಲ್ಲದೆ ಮಕ್ಕಳ ಪಾಲಿಗೆ ಜೀವಂತ ಪ್ರಯೋಗಾಲಯಗಳಾಗಿವೆ. ವಿಜ್ಞಾನ ಪಾಠದಲ್ಲಿ ಓದುವ ದ್ಯುತಿ ಸಂಶ್ಲೇಷಣೆ ಸಸ್ಯಗಳ ವರ್ಗೀಕರಣ ಮತ್ತು ಮಣ್ಣಿನ ಸಂರಕ್ಷಣೆಯನ್ನು ಮಕ್ಕಳು ಇಲ್ಲಿ ಪ್ರಾಯೋಗಿಕವಾಗಿ ಕಲಿಯುತ್ತಿದ್ದಾರೆ. ಪ್ರತಿ ಗಿಡಕ್ಕೂ ಮಕ್ಕಳ ಹೆಸರಿಡುವ ಮೂಲಕ ಅವರಲ್ಲಿ ಪರಿಸರದ ಬಗ್ಗೆ ಮಮತೆ ಮತ್ತು ಜವಾಬ್ದಾರಿ ಬೆಳೆಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್. ರವಿಕುಮಾರ್ ತಿಳಿಸಿದರು.
ಸುಸ್ಥಿರ ಮತ್ತು ಆರೋಗ್ಯಕರ ಜೀವನಶೈಲಿಗೆ ಧನ್ವಂತರಿ ವನವು ಪ್ರಮುಖ ವೇದಿಕೆಯಾಗಿದೆ. ಗಿಡಗಳನ್ನು ನೆಡುವುದು ಕಳೆ ತೆಗೆಯುವುದು ಮಕ್ಕಳಲ್ಲಿ ದೈಹಿಕ ಚಟುವಟಿಕೆ ಹೆಚ್ಚಿಸುತ್ತದೆ. ಅಲ್ಲದೆ ಗಿಡಗಳು ಬೆಳೆಯುವುದನ್ನು ನೋಡುವುದು ಅವರಲ್ಲಿ ಆತ್ಮವಿಶ್ವಾಸ ಮತ್ತು ತಾಳ್ಮೆ ಬೆಳೆಸುತ್ತದೆ.-ಶಿವಕುಮಾರಿ, ಹಿರಿಯ ಸಹಾಯಕ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.