ADVERTISEMENT

ಬಂಗಾರಪೇಟೆ: ಪ್ರಗತಿ ಪರಿಶೀಲನಾ ಸಭೆ

ಜೆಜೆಎಂ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:45 IST
Last Updated 20 ಆಗಸ್ಟ್ 2025, 5:45 IST
ಬಂಗಾರಪೇಟೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ
ಬಂಗಾರಪೇಟೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ   

ಬಂಗಾರಪೇಟೆ: ಪಟ್ಟಣ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಯಿತು. 

ಸಭೆ ಉದ್ದೇಶಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಎಚ್. ರವಿಕುಮಾರ್, ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಸಾಮಾನ್ಯರಿಗೆ ಮೂಲಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು. 

ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನೂರು ದಿನ ಉದ್ಯೋಗ ಅವಕಾಶವನ್ನು ಜನರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಂಡು, ನಿರ್ದಿಷ್ಟ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಂತ್ರಿಕ ಸಹಾಯಕ‌ ಅಭಿಯಂತರರಿಗೆ ಸೂಚಿಸಿದರು.

ADVERTISEMENT

ಈ ಬಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕರ ವಸೂಲಾತಿ ಗುರಿ ಮುಟ್ಟಲು ಸೂಚಿಸಲಾಗಿದೆ. ಕೆರೆ ಒತ್ತುವರಿ ತೆರವಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. 

ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆ, ಕರ ವಸೂಲಾತಿ, ಅಭಿವೃದ್ಧಿ ಕಾರ್ಯಗಳು ಹಾಗೂ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಇತರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಬೇಕು. ಈ ಮೂಲಕ ಪಂಚತಂತ್ರ 2 ತಂತ್ರಾಂಶದಲ್ಲಿ ಉನ್ನತ ಶ್ರೇಣಿ ಪಡೆಯಲು ಗಣಕಯಂತ್ರ ನಿರ್ವಾಹಕರಿಗೆ ಸೂಚಿಸಿದರು.

ನಿಗದಿಗೊಳಿಸಿದ ಅವಧಿಯಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಎಇಇ ಸೂರ್ಯ ಪ್ರಸಾದ್ ಅವರಿಗೆ ತಿಳಿಸಿದರು.

ಈ ಸಭೆಯಲ್ಲಿ ಅಕ್ಷರ ದಾಸೋಹ ನಿರ್ದೇಶಕ ಯುವರಾಜ್, ಎಇಇ ಸೂರ್ಯ ಪ್ರಸಾದ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರವಸೂಲಿಗಾರರು, ಗಣಕಯಂತ್ರ ನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.