ವೇಮಗಲ್: ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಹೆಸರಿಗಷ್ಟೇ ಇದೆ. ಈ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕೊಳಕು ತುಂಬಿ ತುಳುಕುತ್ತಿದೆ.
ಕಸಕಡ್ಡಿ ತುಂಬಿರುವ ಚರಂಡಿಗಳು, ನಿಂತಿರುವ ನೀರಿನಲ್ಲಿ ಸೊಳ್ಳೆಗಳ ದರ್ಶನ, ಕಲುಷಿತ ನೀರನ್ನೇ ಕುಡಿಯುವ ಜಾನುವಾರು... ಇಂಥ ದೃಶ್ಯಗಳು ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ.
ವೇಮಗಲ್ - ಕುರುಗಲ್ ಗ್ರಾಮ ಪಂಚಾಯಿತಿ ಜೊತೆಗೆ ಶೆಟ್ಟಿಹಳ್ಳಿ ಮತ್ತು ಚೌಡದೇನಹಳ್ಳಿ ಗ್ರಾಮ ಪಂಚಾಯಿತಿಯ ಕೆಲವು ಊರುಗಳನ್ನು ಸೇರಿಸಿಕೊಂಡು ವೇಮಗಲ್- ಕುರುಗಲ್ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಪಟ್ಟಣ ಪಂಚಾಯಿತಿ ತನ್ನ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯವನ್ನೇ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ವೇಮಗಲ್ ಪಟ್ಟಣದ ವ್ಯಾಪ್ತಿಯ ವಾರ್ಡಗಳಲ್ಲಿ ಎಲ್ಲೆಂದರಲ್ಲಿ ಕೊಳಕು, ಚರಂಡಿ ನೀರು, ಕಸ- ಕಡ್ಡಿಗಳೇ ತುಂಬಿಕೊಂಡಿವೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ಇದ್ದಾರೆ.
ಪಟ್ಟಣ ಪಂಚಾಯಿತಿಯ ಸ್ವಚ್ಛತಾ ಕಾರ್ಮಿಕರು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಾತ್ರ ಸ್ವಚ್ಛತೆ ಮಾಡುತ್ತಿದ್ದಾರೆ. ಮಾಡುತ್ತಾರೆ. ಇನ್ನು ಇತರೆ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡಿ ಎಂದು ಕೇಳಿದ ಸಾರ್ವಜನಿಕರ ಜತೆ ವಾದ ಮಾಡುತ್ತಾರೆ ಎಂಬುದು ಗ್ರಾಮಸ್ಥರ ಆರೋಪ.
ವೇಮಗಲ್ ಪಟ್ಟಣದಲ್ಲಿ, ಅದರಲ್ಲೂ ಮುಖ್ಯ ರಸ್ತೆಗಳಲ್ಲಿ ಮಾತ್ರ ಸ್ವಚ್ಛತೆ ನಡೆಸುವ ಸಿಬ್ಬಂದಿ ಹಳ್ಳಿಗಳ ಕಡೆ ಮುಖವೇ ಮಾಡುವುದಿಲ್ಲ. ತನ್ನ ವ್ಯಾಪ್ತಿಯಲ್ಲಿನ ಮಡಿವಾಳ ಮಂಚಂಡಹಳ್ಳಿ, ಪುರಹಳ್ಳಿ, ಕಲ್ವ, ಮಂಜಲಿ ಗ್ರಾಮಗಳಲ್ಲಿ ಚರಂಡಿಗಳು ತುಂಬಿಕೊಂಡು ಗಬ್ಬು ನಾರುತ್ತಿವೆ. ಕಸ ತುಂಬುವ ವಾಹನಗಳು ಈ ಗ್ರಾಮಗಳತ್ತ ಸುಳಿಯುವುದೇ ಇಲ್ಲ. ಇದರಿಂದ ಗ್ರಾಮಗಳಲ್ಲಿ ಚರಂಡಿಗಳು ಕಟ್ಟಿಕೊಂಡಿವೆ.
ಮಂಜಲಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಎದುರುಗಡೆಯೇ ಕೊಳಚೆ ನೀರು ತುಂಬಿದ ಕುಂಟೆ ಇದೆ. ಸಂಜೆಯಾದರೆ ಇಲ್ಲಿ ಸೊಳ್ಳೆಗಳ ಸಾಮ್ರಾಜ್ಯವೇ ಮೇಳೈಸುತ್ತದೆ. ಸೊಳ್ಳೆಗಳ ಕಾಟಕ್ಕೆ ಜನ ಬೇಸತ್ತಿದ್ದಾರೆ. ಡೆಂಗಿ ಜ್ವರ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಪ್ರಾಥಮಿಕ ಶಾಲೆಯ ಎದುರುಗಡೆ ಇಂಥ ಸೊಳ್ಳೆಗಳ ಉತ್ಪತ್ತಿ ತಾಣವಿರುವುದು, ಇಲ್ಲಿನ ಸೊಳ್ಳೆಗಳು ಎದುರುಗಡೆಯ ಶಾಲೆಯ ಮಕ್ಕಳಿಗೆ ಕಚ್ಚಿದರೆ ಮಕ್ಕಳ ಆರೋಗ್ಯ ಹದಗೆಡುವುದಂತು ಗ್ಯಾರಂಟಿ ಎಂಬುದು ಪೋಷಕರ ಆತಂಕ.
ಪಟ್ಟಣ ಪಂಚಾಯಿತಿಗೆ ಹೊಂದಿಕೊಂಡೇ ಇರುವ ಪುರಹಳ್ಳಿ ಗ್ರಾಮದಲ್ಲಿನ ಜನತೆ ಇದುವರೆಗೂ ಕಸ ಸಂಗ್ರಹಣೆ ವಾಹನವನ್ನೇ ಕಂಡಿಲ್ಲ. ಹಾಗಾಗಿ, ಗ್ರಾಮದಲ್ಲಿ ಸಂಗ್ರಹಗೊಂಡ ಕಸ ಚರಂಡಿ ಸೇರುತ್ತಿದೆ. ಚರಂಡಿಗಳು ದುರ್ನಾತ ಬೀರಿ, ಸೊಳ್ಳೆಗಳ ಆಶ್ರಯತಾಣವಾಗಿದೆ. ದುರ್ನಾತದಿಂದ ಹಗಲಿನಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ರಾತ್ರಿಯಾದರೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವ ಸ್ಥಿತಿ ಉಂಟಾಗಿದೆ.
ಮಡಿವಾಳ ಗ್ರಾಮದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಗ್ರಾಮದ ಯಾವ ಚರಂಡಿ ನೋಡಿದರೂ ಕೊಳಚೆ ನೀರು ತುಂಬಿಕೊಂಡು ಗಬ್ಬು ನಾತ ಬೀರುತ್ತಿದೆ. ಮಳೆ ಹೆಚ್ಚಾದರೆ ಕೆಲವು ಗ್ರಾಮಗಳಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರಿನ ಜೊತೆಗೆ ಈ ಕಲುಷಿತ ಚರಂಡಿ ನೀರು ನುಗ್ಗುವ ಆತಂಕವೂ ಎದುರಾಗಿದೆ.
ಡೆಂಗಿ ಭೀತಿ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿನ ಸ್ವಚ್ಛತೆಗೆ ತ್ವರಿತವಾಗಿ ಮುಂದಾಗಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಫಾಗಿಂಗ್ ಮಾಡಿಸಬೇಕೆಂಬುದು ಈ ಎಲ್ಲ ಗ್ರಾಮಗಳ ಜನರ ಒಕ್ಕೊರಲ ಆಗ್ರಹವಾಗಿದೆ.
ಮಂಜಲಿ ಗ್ರಾಮದ ಯಾವ ಚರಂಡಿಯೂ ಸ್ವಚ್ಛವಾಗಿಲ್ಲ. ಶಾಲೆಯ ಪಕ್ಕದ ಚರಂಡಿಯಲ್ಲಿ ಕಲುಷಿತ ನೀರು ತುಂಬಿದೆ. ಪ.ಪಂ ಸ್ವಚ್ಛತೆಗೆ ಆದ್ಯತೆ ನೀಡಬೇಕು
– ರಂಜಿತ್ ಕುಮಾರ್ ಶಿಕ್ಷಕ ಮಂಜಲಿ ಗ್ರಾಮ
ಪುರಹಳ್ಳಿಯಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಸರಿಯಾದ ಚರಂಡಿಗಳನ್ನೇ ನಿರ್ಮಿಸಿಲ್ಲ. ಕಲುಷಿತ ನೀರು ಎಲ್ಲೆಂದರಲ್ಲಿ ನಿಂತುಕೊಂಡಿದೆ.
–ಬೈರೇಗೌಡ ಗ್ರಾಮಸ್ಥ ಪುರಹಳ್ಳಿ
ಕಲ್ವ ಗ್ರಾಮದಲ್ಲಿ ಮನೆಗಳ ಅಕ್ಕಪಕ್ಕ ಸ್ವಚ್ಛತೆ ಇಲ್ಲದೆ ಸೊಳ್ಳೆಗಳು ಹೆಚ್ಚಾಗಿವೆ. ಸಂಜೆಯ ನಂತರ ಮನೆಯ ಬಾಗಿಲು ಕಿಟಕಿ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಡೆಂಗಿ ಭಯದಿಂದ ಮಕ್ಕಳನ್ನು ಹೊರಗಡೆ ಬಿಡದೇ ಮನೆಯಲ್ಲಿಯೇ ಕೂಡಿ ಹಾಕಬೇಕಾದ ಪರಿಸ್ಥಿತಿ ಇದೆ
–ನಾಗವೇಣಮ್ಮ ಗೃಹಿಣಿ ಕಲ್ವ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.