ADVERTISEMENT

ಶ್ರೀನಿವಾಸಪುರ | ರೈಲು ನಿಲ್ದಾಣದ ಆಕರ್ಷಣೆ ಗೀಜಗನ ಗೂಡು

ಆರ್.ಚೌಡರೆಡ್ಡಿ
Published 17 ಡಿಸೆಂಬರ್ 2023, 6:34 IST
Last Updated 17 ಡಿಸೆಂಬರ್ 2023, 6:34 IST
ಶ್ರೀನಿವಾಸಪುರ ಹೊರವಲಯದ ರೈಲು ನಿಲ್ದಾಣದಲ್ಲಿನ ಮರಗಳಲ್ಲಿ ನೇತಾಡುತ್ತಿರುವ ಗೀಜಗ ಹಕ್ಕಿ ಗೂಡುಗಳು.
ಶ್ರೀನಿವಾಸಪುರ ಹೊರವಲಯದ ರೈಲು ನಿಲ್ದಾಣದಲ್ಲಿನ ಮರಗಳಲ್ಲಿ ನೇತಾಡುತ್ತಿರುವ ಗೀಜಗ ಹಕ್ಕಿ ಗೂಡುಗಳು.   

ಶ್ರೀನಿವಾಸಪುರ: ಪಟ್ಟಣ ಹೊರವಲಯದ ರೈಲು ನಿಲ್ದಾಣದ ಆವರಣದ ಮರಗಳಲ್ಲಿ ನೇತಾಡುವ ಗೀಜಗ ಹಕ್ಕಿಗಳ ಗೂಡು ಗಮನ ಸೆಳೆಯುತ್ತವೆ.

ಸ್ಥಳೀಯವಾಗಿ 'ಜೀನುಗ ಗುವ್ವ' ಎಂದು ಕರೆಯಲಾಗುವ ಈ ಪುಟ್ಟ ಹಕ್ಕಿಗಳು ಸ್ವಭಾವತ ಸಂಘ ಜೀವಿಗಳು. ರೈಲು ನಿಲ್ದಾಣದ ಆವರಣದಲ್ಲಿ ಮರಗಳಲ್ಲಿ ಅನೇಕ ವರ್ಷಗಳಿಂದ ಗೂಡು ಕಟ್ಟಿಕೊಂಡಿವೆ. ಜಾಲಿ ಪೊದೆ, ಮರಗಳಲ್ಲಿ ನೇತಾಡುತ್ತಿರುವ ಗೂಡುಗಳು ನಿಲ್ದಾಣದ ಆಕರ್ಷಣೆಯ ಕೇಂದ್ರಗಳಾಗಿವೆ. 

ಪುಟ್ಟ ಮೊನಚಾದ ಕೊಕ್ಕಿನಿಂದ ಗೂಡುಕಟ್ಟುವ ಕೌಶಲದಿಂದಾಗಿಯೇ ಈ ಹಕ್ಕಿಯನ್ನು ವೀವಿಂಗ್ ಬರ್ಡ್‌ ಅಥವಾ ನೇಯ್ಗೆ ಹಕ್ಕಿ ಎಂದು ಕರೆಯುತ್ತಾರೆ. 

ADVERTISEMENT

ಈ ಹಕ್ಕಿಗಳು ಸುರಕ್ಷತೆ ದೃಷ್ಟಿಯಿಂದ ಯಾರಿಗೂ ಸುಲಭವಾಗಿ ಕೈಗೆಟುಕದ ಎತ್ತರವಾದ ಮರಗಳಲ್ಲಿ ಗೂಡು ಕಟ್ಟುವುದು ವಾಡಿಕೆ. ಕೆರೆ, ಕುಂಟೆಗಳ ದಡದಲ್ಲಿರುವ ಮರಗಳಲ್ಲಿ ಸಾಮಾನ್ಯವಾಗಿ ಗೂಡು ಕಂಡುಬರುತ್ತವೆ. ಅಂಥ ಸ್ಥಳಗಳ ಅಭಾವದಿಂದ ಎತ್ತರವಾದ ಮರಗಳ ಹೊರಭಾಗದ ಸಣ್ಣದಾದ ಕೊಂಬೆಗಳಲ್ಲಿ ಗೂಡು ಕಟ್ಟಲು ಪ್ರಾರಂಭಿಸಿವೆ.

ಗಂಡು ಹಕ್ಕಿ, ತಲೆಕೆಳಗಾಗಿ ನೇತಾಡುವ ಸುಂದರ ಗೂಡು ಹೆಣೆದು ಹೆಣ್ಣು ಹಕ್ಕಿಯನ್ನು ಆಕರ್ಷಿಸುತ್ತದೆ. ಗೂಡು ಪ್ರವೇಶಕ್ಕೆ ಕೆಳಗಿನಿಂದ ಕೊಳವೆ ಆಕಾರದ ದ್ವಾರ ನಿರ್ಮಿಸಿರುತ್ತವೆ. ಮೊಟ್ಟೆ ಇಡಲು ಪೂರಕವಾದ ಒಂದು ಭಾಗ ಗೂಡಿನಲ್ಲಿರುತ್ತದೆ. ಗಂಡು ಹಕ್ಕಿ ಸರಳವಾದ ಗೂಡು ನಿರ್ಮಿಸಿಕೊಂಡು ಜೀವಿಸುತ್ತದೆ.

ಹುಲ್ಲಿನ ಚಿಕ್ಕ ಬೀಜ, ತೃಣಧಾನ್ಯ ಹಾಗೂ ಹುಳು ಹುಪ್ಪಟೆ ಗೀಜಗದ ಆಹಾರ. ಹೆಚ್ಚಿನ ಸಂಖ್ಯೆಯ ಹಕ್ಕಿಗಳು ಒಂದು ಕಡೆ ವಾಸಿಸುವುದರಿಂದ ಸುತ್ತಲಿನ ಜಮೀನಲ್ಲಿ ಬೆಳೆದಿರುವ ಬೆಳೆಗೆ ಮಾರಕವಾಗಿರುವ ಹುಳು ಹಾಗೂ ಕೀಟಗಳನ್ನು ತಿನ್ನುತ್ತವೆ. ಕೊಂಡೊಯ್ದು ಮರಿಗಳಿಗೂ ಉಣಿಸುತ್ತವೆ.  

'ಜೀವಿಸಲು ಯೋಗ್ಯವಾದ ಪರಿಸರದ ಕೊರತೆ ಹಾಗೂ ಮೊಬೈಲ್ ಗೋಪುರಗಳ ಅಳವಡಿಕೆಯಿಂದಾಗಿ ಗೀಜಗ ಸಂತತಿ ಗುಬ್ಬಿಯ ಜಾಡು ಹಿಡಿದಿದೆ. ದಿನದಿಂದ ದಿನಕ್ಕೆ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಆದಿವಾಸಿ ಹಕ್ಕಿಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ' ಎನ್ನುತ್ತಾರೆ ಪರಿಸರವಾದಿ ರಾಂಪುರ ಅಶೋಕ್ ಕುಮಾರ್.

ಶ್ರೀನಿವಾಸಪುರ ಹೊರವಲಯದ ರೈಲು ನಿಲ್ದಾಣದಲ್ಲಿನ ಮರಗಳಲ್ಲಿ ನೇತಾಡುತ್ತಿರುವ ಗೀಜಗ ಹಕ್ಕಿ ಗೂಡುಗಳು.
ಶ್ರೀನಿವಾಸಪುರ ಹೊರವಲಯದ ರೈಲು ನಿಲ್ದಾಣದಲ್ಲಿನ ಮರಗಳಲ್ಲಿ ನೇತಾಡುತ್ತಿರುವ ಗೀಜಗ ಹಕ್ಕಿ ಗೂಡುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.