
ಕೆಜಿಎಫ್: ಇಲ್ಲಿನ ಬೆಮಲ್ ಕಲಾಕ್ಷೇತ್ರದಲ್ಲಿ ಬೆಮಲ್ ಕನ್ನಡ ಮಿತ್ರರು ಸಂಸ್ಥೆ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಮಲ್ ಅಧಿಕಾರಿ ನಾಡಗೀತೆಗೆ ಅವಮಾನ ಮಾಡಿದ ಘಟನೆ ನಡೆದಿದೆ.
ಮೂರು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನ ನಡೆದ ಕಾರ್ಯಕ್ರಮದಲ್ಲಿ ಬೆಮಲ್ ಮುಖ್ಯ ಪ್ರಧಾನ ವ್ಯವಸ್ಥಾಪಕಿ (ಮಾನವ ಸಂಪನ್ಮೂಲ) ನೀನಾಸಿಂಗ್ ಅವರು ನಾಡಗೀತೆಗೆ ಗೌರವ ಕೊಡದೆ, ಮಕ್ಕಳ ತಂಡ ನಾಡಗೀತೆ ಹಾಡುತ್ತಿದ್ದಾಗಲೇ ವೇದಿಕೆಯಿಂದ ನಿರ್ಗಮಿಸಿದ್ದು, ಕನ್ನಡಾಭಿಮಾನಿಗಳನ್ನು ಕೆರಳಿಸಿದೆ.
ಆಯೋಜಕರು ನಾಡಗೀತೆ ಆದ ತಕ್ಷಣವೇ ವೇದಿಕೆಯಿಂದ ಬಿಡುಗಡೆ ಮಾಡುತ್ತೇವೆ ಎಂದು ಕೋರಿದರೂ, ಲೆಕ್ಕಿಸದೆ, ಬೆಂಗಳೂರಿಗೆ ಹೋಗಲು ತಡವಾಗುತ್ತದೆ ಎಂದು ಹೇಳಿ ಇಡೀ ಸಭಾಂಗಣವೇ ಎದ್ದುನಿಂತು ಗೌರವ ಸಲ್ಲಿಸುತ್ತಿದ್ದಾಗ, ವೇದಿಕೆಯಿಂದ ಹೊರ ನಡೆದಿದ್ದಾರೆ.
ಕನ್ನಡ ಮಿತ್ರರು ಸಂಸ್ಥೆಯ ಅಧ್ಯಕ್ಷ ಆರ್.ಎ.ಎಸ್.ಪಾಟೀಲ್ ವೇದಿಕೆಯಲ್ಲಿಯೇ ಅಧಿಕಾರಿಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಶಕ್ತಿ ಕೇಂದ್ರದ ಬಾ.ಹಾ.ಶೇಖರಪ್ಪ ಮಾತನಾಡಿ, ನಾಡಗೀತೆ ಹಾಡುವ ಮಧ್ಯದಲ್ಲಿಯೇ ನೀನಾಸಿಂಗ್ ಅವರು, ಹೊರಟು ಹೋಗಿರುವುದು ಅವರ ಉದ್ದಟತನವನ್ನು ತೋರುತ್ತದೆ. ನಾಡು ನುಡಿ ನೆಲ ಜಲ ಈ ವಿಚಾರದಲ್ಲಿ ಅವರ ನಿರ್ಲಕ್ಷ ಧೋರಣೆ ಖಂಡನೀಯ ಎಂದರು.
ಕನ್ನಡಿಗರ ಆಸ್ಮಿತೆ ಕೆಣಕುತ್ತಿರುವುದನ್ನು ನೋಡಿ ಕನ್ನಡಿಗರು ಸುಮ್ಮನಿರಲು ಸಾಧ್ಯವಿಲ್ಲ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಮಲ್ ಅಧಿಕಾರಿಯು ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ. ಅವರು ವಾಸ ಮಾಡುತ್ತಿರುವ ಮತ್ತು ಕೆಲಸ ಮಾಡುತ್ತಿರುವ ನಾಡಿನ ಬಗ್ಗೆ ಕನಿಷ್ಠ ವಿಷಯವನ್ನಾದರೂ ತಿಳಿದುಕೊಳ್ಳಬೇಕು. ಕೇಂದ್ರ ಸರ್ಕಾರದ ಅಧಿಕಾರಿ ಎಂಬ ಅಹಂಕಾರದಲ್ಲಿ ಕನ್ನಡ ಭಾಷೆಗೆ ಅವರು ಅವಮಾನ ವೆಸಗಿದ್ದಾರೆ. ಅವರು ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ರೆಡ್ಡಿ ಒತ್ತಾಯಿಸಿದ್ದಾರೆ.
ಕಲಾಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವದ ಮೊದಲ ದಿನದ ಕಾರ್ಯಕ್ರಮವನ್ನು ಬೆಮಲ್ ಕೆಜಿಎಫ್ ಘಟಕದ ಮುಖ್ಯಸ್ಥ ಸುಬ್ರಹ್ಮಣ್ಯ ಅವರು ಉದ್ಘಾಟಿಸಿದರು. ಕಲಾವಿದ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಶೈಲಜಾ ರಮೇಶ್, ಅಶೋಕ ನಿಡಗುಂದಿ, ಕುಬೇರಪ್ಪ, ಮಂಜುನಾಥ ನಾಯಕ್ ಹಾಜರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.