ಕೆಜಿಎಫ್: ಅತ್ಯಂತ ದುಸ್ಥಿತಿಯಲ್ಲಿರುವ ನಿಲ್ದಾಣವೆಂಬ ಕುಖ್ಯಾತಿಗೆ ಒಳಗಾಗಿದ್ದ ಬೆಮಲ್ ರೈಲು ನಿಲ್ದಾಣ ಈಗ ಆಧುನಿಕವಾಗಿ ಸಿಂಗಾರ ಗೊಂಡಿದ್ದು, ನೂತನ ಟಿಕೆಟ್ ಕೌಂಟರ್ ಸೆ.5ಕ್ಕೆ ಉದ್ಘಾಟನೆಯಾಗಲಿದೆ.
ನಗರದ ಐದು ರೈಲ್ವೆ ನಿಲ್ದಾಣದ ಪೈಕಿ ಬೆಮಲ್ ಹಾಲ್ಟ್ ಸ್ಟೇಷನ್ ಆಗಿದ್ದು, ಯಾವುದೇ ಸೌಕರ್ಯ ಇರಲಿಲ್ಲ. ಬೆಮಲ್‌ನಗರ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳಿಗೆ ನಿಲ್ದಾಣ ಅತ್ಯಂತ ಹತ್ತಿರದ ನಿಲ್ದಾಣವಾಗಿತ್ತು. ಬೆಮಲ್ ಕಾರ್ಮಿಕರಿಗೆ ಕೂಡ ಸನಿಹವಾಗಿತ್ತು. ಆದರೆ ಶೌಚಾಲಯ, ದೀಪ ಸೇರಿದಂತೆ ಯಾವುದೇ ಸೌಕರ್ಯ ಇರಲಿಲ್ಲ. ನಿಲ್ದಾಣದಿಂದ ಹೊರಬರುವಾಗ ಬೆಮಲ್ ಕಾರ್ಖಾನೆಯ ರಸ್ತೆಯಲ್ಲಿ ಕೂಡ ದೀಪಗಳು ಇರಲಿಲ್ಲ. ರಾತ್ರಿ ಬೆಂಗಳೂರಿನಿಂದ ಬರುವ ರೈಲುಗಳು ಬೆಳಕೇ ನಿಲ್ದಾಣದ ಬೆಳಕಾಗಿತ್ತು. ರೈಲು ಹೋದ ನಂತರ ಇಡೀ ಪ್ರದೇಶ ಕತ್ತಲುಮಯವಾಗಿರುತ್ತಿತ್ತು.
ಜಿಲ್ಲೆಯ ಹಲವಾರು ರೈಲ್ವೆ ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿವೆ. ಬೆಮಲ್ ನಿಲ್ದಾಣದಲ್ಲಿ ಶೌಚಾಲಯ ಸಹಿತ ಟಿಕೆಟ್ ಕೌಂಟರ್ ನಿರ್ಮಾಣ ಮಾಡಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ದೀಪಗಳನ್ನು ಅಳವಡಿಸಲಾಗಿದ್ದು, ರೈಲ್ವೆ ನಿಲ್ದಾಣದ ಗೇಟ್ ಬಳಿ ಇದ್ದ ಅನುಪಯುಕ್ತ ಗಿಡಗಳನ್ನು ಸ್ವಚ್ಛ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.