ADVERTISEMENT

ಮುಸ್ಲಿಂ ತುಷ್ಟೀಕರಣದಿಂದ ಬಾಂಬ್‌ ಸ್ಫೋಟ: ಪ್ರಮೋದ್ ಮುತಾಲಿಕ್

ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ–ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 15:27 IST
Last Updated 3 ಮಾರ್ಚ್ 2024, 15:27 IST
ಕೋಲಾರದಲ್ಲಿ ಭಾನುವಾರ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡಿದರು
ಕೋಲಾರದಲ್ಲಿ ಭಾನುವಾರ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡಿದರು   

ಕೋಲಾರ: ‘ಕಾಂಗ್ರೆಸ್‌ ಸರ್ಕಾರದ ಮುಸ್ಲಿಂ ತುಷ್ಟೀಕರಣದಿಂದ ಬಾಂಬ್‌ ಸ್ಫೋಟ, ಪಾಕಿಸ್ತಾನ ಜಿಂದಾಬಾದ್‌ ಪ್ರಕರಣ ಸಂಭವಿಸುತ್ತಿವೆ. ಮುಸ್ಲಿಮರಿಂದ ಗೆದ್ದಿದ್ದೇವೆ ಎಂಬ ಸೊಕ್ಕು, ಅಹಂಕಾರ ಈ ಸರ್ಕಾರಕ್ಕಿದೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ‘ಮೋದಿ ಗೆಲ್ಲಿಸಿ–ಭಾರತ ಉಳಿಸಿ’ ಎಂಬ ಬೃಹತ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ‌, ‘ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದವರನ್ನು ಬಂಧಿಸಬಾರದು; ಗುಂಡು ಹೊಡೆಯಬೇಕು. ದೇಶದ್ರೋಹಿ ಕ್ಯಾನ್ಸರ್‌ ಅದು. ಅದಕ್ಕೆ ಔಷಧ ಇಲ್ಲ. ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಬೇಕು; ಇಲ್ಲದಿದ್ದರೆ ದೇಶದ ತುಂಬೆಲ್ಲಾ ವಿಷ ಹರಡುತ್ತದೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ನಡೆದಿದೆ. ಇದು ಪೂರ್ವಯೋಜಿತ ಕೃತ್ಯ. ಇದರ ಹಿಂದೆ ಹಲವರ ಕೈವಾಡವಿದೆ. ಸರ್ಕಾರ ಹಾಗೂ ವಿರೋಧ ಪಕ್ಷ ಬಾಯಿ ಮುಚ್ಚಿಕೊಂಡಿರಬೇಕು. ಪೊಲೀಸರಿಗೆ ಮುಕ್ತ ಅವಕಾಶ ನೀಡಿದರೆ ಒದ್ದು ಒಳಗೆ ಹಾಕುತ್ತಾರೆ’ ಎಂದರು.

‘ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಹಿಜಾಬ್‌ ಧರಿಸಿ ಎನ್ನುತ್ತಾರೆ. ಸಭೆಯೊಂದರಲ್ಲಿ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಹೇಳುತ್ತಾರೆ. ಇದರಿಂದ ಮುಸ್ಲಿಮರಿಗೆ ಕುಮ್ಮಕ್ಕು ನೀಡಿದಂತಾಗಲಿದೆ. ಹೀಗಾಗಿ, ವಿಧಾನಸೌಧದ ಒಳಗೆ, ಸಂವಿಧಾನಬದ್ಧ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗುವ ಸೊಕ್ಕು ಬಂದಿದೆ’ ಎಂದು ಹರಿಹಾಯ್ದರು.

ADVERTISEMENT

‘ಮುಜರಾಯಿ ಇಲಾಖೆಯ ದೊಡ್ಡ ದೊಡ್ಡ ದೇಗುಲಗಳಿಂದ ಸರ್ಕಾರಕ್ಕೆ ಬೇಕಾದಷ್ಟು ಆದಾಯ ಬರುತ್ತಿದೆ. ಆ ಹಣ ಪಡೆದು ಮುಸ್ಲಿಮರ ಶಾದಿ ಮೊಹಲ್ಲಾಕ್ಕೆ, ಕ್ರೈಸ್ತರ ಚರ್ಚ್‌ಗೆ ಕೊಡುವ ಕೆಲಸ ಮಾಡಲಾಗುತ್ತಿದೆ. ಆದರೆ, ಪಾಳು ಬಿದ್ದ ದೇಗುಲಗಳನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ಟೀಕಿಸಿದರು.

‘ಕೋಲಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ಇರುವ ಕೀಲುಕೋಟೆ ಮಾರುತಿ ದೇವಸ್ಥಾನಕ್ಕೆ 600 ವರ್ಷಗಳ ಇತಿಹಾಸವಿದೆ. ಇದು ಮುಜರಾಯಿ ಇಲಾಖೆಗೆ ಸೇರಿದ್ದು. ಇಲಾಖೆಯಲ್ಲಿ ಎ, ಬಿ, ಸಿ ದರ್ಜೆಯ ದೇಗಲುಗಳೆಂದು ವಿಂಗಡಿಸಲಾಗಿದೆ. ₹1 ಕೋಟಿಗೂ ಹೆಚ್ಚು ಆದಾಯ ಬರುವವು ‘ಎ’, ₹1 ಕೋಟಿ ಒಳಗೆ ಆದಾಯ ಇರುವವು ‘ಬಿ’, ₹10 ಲಕ್ಷಕ್ಕೂ ಕಡಿಮೆ ಆದಾಯ ಬರುವ ದೇಗುಲಗಳನ್ನು ‘ಸಿ’ ದರ್ಜೆ ಎಂದು ವಿಂಡಿಸಲಾಗಿದೆ. ಆದರೆ, ಇಲ್ಲಿನ ಮಾರುತಿ ದೇವಾಲಯದಿಂದ ಯಾವುದೇ ಆದಾಯವಿಲ್ಲ. ಈ ದೇವಾಲಯವನ್ನು ಸರ್ಕಾರ ಅನಾಥವಾಗಿ ಬಿಟ್ಟಿದೆ. ಇದು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.

‘ಸರ್ಕಾರದಿಂದ ಸಾಧ್ಯವಾದರೆ ಜೀರ್ಣೋದ್ಧಾರ ಮಾಡಬೇಕು. ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಕೊಡಲಿದ್ದೇವೆ. ಸಾಧ್ಯವಾಗದಿದ್ದರೆ ಕೋಲಾರದ ಜನರೇ ದೇಗುಲ ಶುದ್ಧೀಕರಿಸಿ ಜೀರ್ಣೋದ್ಧಾರ ಮಾಡಲು ಸಿದ್ಧರಿದ್ದಾರೆ. ನೀಲನಕ್ಷೆ ಸಿದ್ಧಪಡಿಸಿ ಒಂದು ವರ್ಷದೊಳಗೆ ಮಾಡುತ್ತೇವೆ. ಒಂದು ಟ್ರಸ್ಟ್‌ ಮಾಡಿಕೊಂಡು ಅತ್ಯಂತ ಸುಂದರವಾಗಿ ಪುನರ್‌ ನಿರ್ಮಿಸುವುದಾಗಿ ಭಕ್ತರೇ ಹೇಳಿದ್ದಾರೆ’ ಎಂದರು.

ಕೀಲುಕೋಟೆ ಮಾರುತಿ ದೇವಸ್ಥಾನಕ್ಕೆ ಅವರು ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕೋಲಾರ ನಗರದ ಕೀಲುಕೋಟೆ ಮಾರುತಿ ದೇವಸ್ಥಾನಕ್ಕೆ ಭಾನುವಾರ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಪರಿಶೀಲಿಸಿದರು

‘ಮೋದಿ ಗೆಲ್ಲಿಸಿ-ಭಾರತ ಉಳಿಸಿ’ ಅಭಿಯಾನದಲ್ಲಿ ಭಾಗಿ ಪಾಕಿಸ್ತಾನ ಜಿಂದಾಬಾದ್‌ ಎಂದವರಿಗೆ ಗುಂಡು ಹೊಡೆಯಬೇಕು–ಮುತಾಲಿಕ್‌ ಬಾಂಬ್‌ ಸ್ಫೋಟ ಪೂರ್ವಯೋಜಿತ ಕೃತ್ಯ

ಲೋಕಸಭೆ ಚುನಾವಣೆಯಲ್ಲಿ ‌ನಾನಾಗಲಿ ಶ್ರೀರಾಮಸೇನೆಯ ಬೇರೆ ಯಾರೂ ಕಣಕ್ಕೆ ಇಳಿಯಲ್ಲ. ‘ಮೋದಿ ಗೆಲ್ಲಿಸಿ ಭಾರತ ಉಳಿಸಿ’ ಅಭಿಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ

-ಪ್ರಮೋದ್‌ ಮುತಾಲಿಕ್‌ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ

‘ಅರ್ಚಕರು ಮೌಲ್ವಿಗಳ ವೇತನದಲ್ಲಿ ತಾರತಮ್ಯ’

‘ಮುಜರಾಯಿ ದೇಗುಲಗಳ ಹಣವನ್ನು ಹಿಂದೂ ದೇಗುಲಗಳಿಗೆ ಮಾತ್ರ ಕೊಡುವುದಾಗಿ ಇಲಾಖೆ ಸಚಿವರು ಸುಳ್ಳು ಹೇಳುತ್ತಿದ್ದಾರೆ. ‘ಎ’ ‘ಬಿ’ ದರ್ಜೆಯ ದೇಗುಲ ಅರ್ಚಕರಿಗೆ ತಿಂಗಳಿಗೆ ₹5 ಸಾವಿರ ವೇತನ ಕೊಡಲಾಗುತ್ತಿದೆ. ಈ ಹಣ ಹೂವು ಹಣ್ಣು ಎಣ್ಣೆ ಬತ್ತಿ ಖರೀದಿಗೂ ಸಾಧ್ಯವಾಗುವುದಿಲ್ಲ. ಅವರ ಉಪಜೀವನ ಹೇಗೆ ಸಾಧ್ಯ? ಆದರೆ ಒಬ್ಬ ಮೌಲ್ವಿಗೆ ಸರ್ಕಾರ ₹1 ಲಕ್ಷ ಕೊಡುತ್ತಿದೆ. ಏಕಿಷ್ಟು ತಾರತಮ್ಯ? ವೋಟಿಗಾಗಿ ಮುಸ್ಲಿಂ ತುಷ್ಟೀಕರಣವೇ? ದೇವಸ್ಥಾನದ ಹುಂಡಿ ಹಣವನ್ನು ದೇಗುಲಗಳ ಅಭಿವೃದ್ಧಿಗೆ ಕೊಡುವುದನ್ನು ಬಿಟ್ಟು ಸ್ವಾರ್ಥಕ್ಕೆ ಬಳಸುತ್ತಿದ್ದಾರೆ’ ಎಂದು ಪ್ರಮೋದ್‌ ಮುತಾಲಿಕ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.