ADVERTISEMENT

ಕೋಲಾರ | ಜಲಾಶಯದ ಸೇತುವೆ ಬಿರುಕು; ತಾಂತ್ರಿಕ ವರದಿ ಬಳಿಕ ಕ್ರಮ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 6:03 IST
Last Updated 24 ಅಕ್ಟೋಬರ್ 2025, 6:03 IST
ಬೇತಮಂಗಲದ ಜಲಾಶಯದ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ಗೇಟ್ ಅನ್ನು ಜಿಲ್ಲಾಧಿಕಾರಿ ಎಂ.ಆರ್‌.ರವಿ ಪರಿಶೀಲಿಸಿದರು
ಬೇತಮಂಗಲದ ಜಲಾಶಯದ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ಗೇಟ್ ಅನ್ನು ಜಿಲ್ಲಾಧಿಕಾರಿ ಎಂ.ಆರ್‌.ರವಿ ಪರಿಶೀಲಿಸಿದರು   

ಬೇತಮಂಗಲ: ಬೇತಮಂಗಲ ಜಲಾಶಯ ಭರ್ತಿಯಾಗಿದ್ದು, ಕೋಡಿ ಹಾಗೂ ಗೇಟ್‌ನಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಪಾಲಾರ್ ಜಲಾಶಯದ ಸೇತುವೆ ಗೇಟ್‍ಗಳ ಮೇಲೆ ಸಂಚರಿಸಿ ಬಿರುಕು ಬಿಟ್ಟಿರುವ ಕಂಬಗಳನ್ನು ವೀಕ್ಷಿಸಿದರು. ತಾಂತ್ರಿಕ ತಂಡ ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಜಲಾಶಯದ ಸೇತುವೆಯನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ವಹಣೆ ಮಾಡುತ್ತಿದ್ದು, ಗೇಟ್‌ನಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದೇನೆ. ಅನುಭವಿ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಪರಿಶೀಲಿಸಿ ಮುಂದಿನ ಸೋಮವಾರ ವರದಿ ಕೊಡುತ್ತಾರೆ. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

ಜಲಾಶಯ ತುಂಬಿ ಹರಿಯುತ್ತಿದ್ದು, ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.

ಈ ಜಲಾಶಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಯೋಗ್ಯಕರವಾಗಿದ್ದು, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರವಾಸಿಗರು ಬರುತ್ತಿರುವುದರಿಂದ ಮೂಲ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಪೊಲೀಸರು, ಪ್ರವಾಸಿ ಮಿತ್ರ ಹಾಗೂ ಹೋಂ ಗಾರ್ಡ್ ಹಾಗೂ ಕಂದಾಯ ಇಲಾಖೆ, ಪಂಚಾಯಿತಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಎಲ್ಲರೂ ಸೇರಿ ತಂಡಗಳನ್ನು ಮಾಡಿಕೊಂಡು ಇಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಸೂಚನಾ ಫಲಕಗಳನ್ನು ಅಳವಡಿಸಬೇಕು. ಜನರು, ಮಕ್ಕಳು ನೀರಿನಲ್ಲಿ ಆಟವಾಡುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬೋಟು ಹಾಗೂ ಈಜುಗಾರರನ್ನು ನಿಯೋಜಿಸಬೇಕೆಂದು ಸೂಚಿಸಿದರು.

ಬಂಗಾರು ತಿರುಪತಿ ಮಾರ್ಗವಾಗಿ ಕೋಡಿಹಳ್ಳಿ ಗ್ರಾಮದ ಒಳಗಿನ ಕೋಡಿ ಹರಿಯುತ್ತಿರುವ ಪ್ರದೇಶಕ್ಕೆ ಹೋಗಬೇಕಾದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಅದನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಬೋಟಿಂಗ್ ಆರಂಭ ಮಾಡಬಹುದಾಗಿದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಎಲ್ಲಾ ಅವಕಾಶಗಳು ಮತ್ತು ಸಾಮರ್ಥ್ಯವಿದೆ. ಬೇತಮಂಗಲ ಹಾಗೂ ಹಾಗೂ ರಾಮಸಾಗರ ಕೆರೆಯನ್ನು ಸಿಎಸ್‌ಆರ್‌ ಅನುದಾನ ಬಳಸಿಕೊಂಡು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಬೇತಮಂಗಲ ಮತ್ತು ಕೆಜಿಎಫ್ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ನಮ್ಮ ಬಳಿ ಸಾಕಷ್ಟು ನೀರಿದೆ. ಆದರೆ, ನೀರು ಶುದ್ಧೀಕರಣ ಮತ್ತು ಶೇಖರಣೆ ಮಾಡುವ ಸಾಮರ್ಥ್ಯ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಇದರ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡಿ ಎರಡು ನಗರಗಳಿಗೂ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಕೋಡಿಹಳ್ಳಿ ಭಾಗದಲ್ಲಿ ತಾತ್ಕಾಲಿಕವಾಗಿ ಜನರು ಅಂಗಡಿ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದು, ಕಸವನ್ನು ಅಲ್ಲಿಯೇ ಹಾಕಿದ್ದರು. ಕೂಡಲೇ ಸ್ವಚ್ಛತೆ ಕಾರ್ಯ ನಡೆಸಿ ಮಾಹಿತಿ ನೀಡಬೇಕೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಳಿಗೆ ಸೂಚಿಸಿದರು.

ಕೆಜಿಎಫ್ ತಹಶೀಲ್ದಾರ್ ಭರತ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶಪ್ಪ, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಶೇಖರ್, ಸಹಾಯಕ ಎಂಜಿನಿಯರ್‌ ಎನ್.ಕೆ.ವಿಕ್ರಾಂತ್, ಬೇತಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿನೂ ಕಾರ್ತಿಕ್, ಮಮತಾ ಗಣೇಶ್, ಅಭಿವೃದ್ಧಿ ಅಧಿಕಾರಿ ವಸಂತ್ ಕುಮಾರ್, ಪಿಎಸ್‌ಐ ನಾರಾಯಣಸ್ವಾಮಿ, ಉಪ ತಹಸೀಲ್ದಾರ್ ಜಯರಾಮ್, ಕಾರ್ಯದರ್ಶಿ ಕೃಷ್ಣಮೂರ್ತಿ, ಸಿಬ್ಬಂದಿ ರಾಮು, ಸೋಮಣ್ಣ, ಮುಖಂಡರಾದ ಅಕಿಲ್ ಪಾಷಾ, ವೆಂಕಟೇಶ್ ಅಪ್ಪಿ, ಪ್ರವೀಣ್, ಹುಳ್ಕೂರು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಜಿಲ್ಲೆಯಲ್ಲಿ ಒಟ್ಟು 3232 ಕೆರೆಗಳಿದ್ದು ಒತ್ತುವರಿ ತೆರವು ಕಾರ್ಯ ಪ್ರಗತಿಯಲಿದೆ. 2700 ಕೆರೆಗಳ ಸರ್ವೇ ಮಾಡಿ ಜೊತೆಗೆ ಒತ್ತುವರಿ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ.
– ಎಂ.ಆರ್‌.ರವಿ, ಜಿಲ್ಲಾಧಿಕಾರಿ
ಅಧಿಕಾರಿಗಳ ವಿರುದ್ಧ ಅಸಮಾಧಾನ
15 ದಿನಗಳಿಂದ ನಿರಂತರವಾಗಿ ಪಾಲಾರ್ ನದಿಯು ಕೋಡಿ ಹೋಗುತ್ತಿದ್ದು ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ‌ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಕಂದಾಯ ಇಲಾಖೆ ಜಲಮಂಡಳಿ ಪೊಲೀಸ್ ಇಲಾಖೆ ಸೇರಿದಂತೆ ಯಾರೊಬ್ಬರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲದಿರುವುದು ಸ್ವಚ್ಛತೆ ಕಾಪಾಡಿಕೊಳ್ಳದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಯು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ಕ್ರಮ ವಹಿಸುವಂತೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗೆ ಸೂಚಿಸಿದರು.
ಬೇತಮಂಗಲ ಕೆರೆ ಕೋಡಿ ಹರಿಯುತ್ತಿದ್ದು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಭರವಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.