ADVERTISEMENT

ಕೋಲಾರ: ಮಧ್ಯವರ್ತಿಗೆ ಕಡಿವಾಣ ಹಾಕಲು ಸೂಚನೆ

ಭೋವಿ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರದಿಂದ 8 ಯೋಜನೆ: ನಿಗಮದ ಅಧ್ಯಕ್ಷ ರಾಮಪ್ಪ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:54 IST
Last Updated 7 ನವೆಂಬರ್ 2025, 6:54 IST
ಕೋಲಾರದಲ್ಲಿ ಗುರುವಾರ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಎಂ.ಆರ್.ರವಿ, ಪ್ರವೀಣ್‌ ಪಿ.ಬಾಗೇವಾಡಿ, ಚಂದ್ರನಾಯಕ್‌, ಎನ್‌.ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಗುರುವಾರ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಎಂ.ಆರ್.ರವಿ, ಪ್ರವೀಣ್‌ ಪಿ.ಬಾಗೇವಾಡಿ, ಚಂದ್ರನಾಯಕ್‌, ಎನ್‌.ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು   

ಕೋಲಾರ: ಭೋವಿ ಸಮುದಾಯದವರ ಅಭಿವೃದ್ಧಿಗಾಗಿ ಸರ್ಕಾರವು ಎಂಟು ಯೋಜನೆ ಜಾರಿಗೆ ತಂದಿದ್ದು, ಪ್ರಾಮಾಣಿಕವಾಗಿ ಹಾಗೂ ನೇರವಾಗಿ ಫಲಾನುಭವಿಗಳಿಗೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಮುದಾಯದ ಮುಖಂಡರು ಸಾರ್ವಜನಿಕರಿಗೆ ಅರಿವು ಮೂಡಿಸಿಬೇಕು, ಅರ್ಜಿ ಸಲ್ಲಿಸಲು ಸಹಕರಿಸಬೇಕು ಎಂದರು.

ADVERTISEMENT

ಅರ್ಹರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬಂದು ಅರ್ಜಿ ಹಿಂದೆ ಬೀಳುವ ಕೆಲಸ ಮಾಡಬೇಡಿ. ನಾನೇ ತಮ್ಮ ಜಿಲ್ಲೆಗೇ ಬಂದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ಸನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ಫಲಾನುಭವಿಗಳ ಆಯ್ಕೆ ಸಮಿತಿ ರಚಿಸಿ ಸೂಕ್ತ ಅರ್ಜಿದಾರರನ್ನು ಆಯ್ಕೆಮಾಡಿದರೆ ನಾವು ಶಿಪಾರಸ್ಸು ಮಾಡಿ ನಿಗಮದಿಂದ ಸೌಲಭ್ಯವನ್ನು ಒದಗಿಸುತ್ತೇವೆ ಎಂದು ತಿಳಿಸಿದರು.

ಭೋವಿ, ಒಡ್ಡೆ, ಒಡ್ಡರ್, ವಡ್ಡರ್‌, ಕಲ್ಲು ಒಡ್ಡರ, ಮಣ್ಣುವಡ್ಡರ ಸೇರಿದಂತೆ ಒಟ್ಟು 9 ಉಪಜಾತಿಗಳ ಸಮಗ್ರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದೇ ನಿಗಮದ ಪ್ರಮುಖ ಗುರಿಯಾಗಿದೆ. ಜಿಲ್ಲೆಯಲ್ಲಿ ಭೋವಿ ಸಮುದಾಯದವರು 82,035 ಮಂದಿ ಇದ್ದಾರೆ ಎಂದರು.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ₹ 1 ಲಕ್ಷ ವರೆಗೆ ನೀಡಲಾಗುತ್ತದೆ. ಗಂಗಾ ಕಲ್ಯಾಣ ಯೋಜನೆಯಡಿ (ಕೃಷಿ ಭೂಮಿಗೆ ಕೊಳವೆ ಬಾವಿ ಮತ್ತು ಪಂಪ್ ಸೆಟ್) ಜಿಲ್ಲೆಗೆ ₹ 4.75 ಲಕ್ಷ ಕೊಡಲಾಗುತ್ತದೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ 10 ಸದಸ್ಯರಿದ್ದರೆ ₹ 5 ಲಕ್ಷ ಕೊಡಲಾಗುವುದು. ಭೂ ಒಡೆತನ ಯೋಜನೆಯಡಿ ಭೂರಹಿತ ಕುಟುಂಬಕ್ಕೆ ₹ 25 ಲಕ್ಷ ಘಟಕ ವೆಚ್ಚದಲ್ಲಿ ಭೂಮಿ ಖರೀದಿಗೆ ನೆರವು ನೀಡಲಾಗುತ್ತದೆ. ಇದರಲ್ಲಿ ಶೇ 50 ರಷ್ಟು ಸಹಾಯಧನ ಮತ್ತು ಶೇ 50 ರಷ್ಟು ಸಾಲ ಇರುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಿ ಅದರಲ್ಲಿ ಎಲ್ಲಾ ನಿಗಮ ಮಂಡಳಿಗಳಲ್ಲಿನ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಭೋವಿ ಜನಾಂಗದ ಕುಶಲಕರ್ಮಿಗಳು, ಉದ್ಯಮದಾರರು, ಹೈನುಗಾರರು, ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಸಬ್ಸಿಡಿ, ಸಾಲ ಹಾಗೂ ಇತರೆ ಸವಲತ್ತು ಕೊಡಿಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರಿಗೆ ಉದ್ಯಮಶೀಲ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌, ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು.ಚಂದ್ರನಾಯಕ್‌, ನಿಗಮದ ಜಿಲ್ಲಾ ವ್ಯವಸ್ಥಾಪಕಿ ಎನ್‌.ವಿಜಯಲಕ್ಷ್ಮಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಸಮುದಾಯದ ಮುಖಂಡರಾದ ಮಾಲೂರು ಲೋಕೇಶ್‌, ಗೋಪಾಲ್‌, ವರದೇನಹಳ್ಳಿ ವೆಂಕಟೇಶ್‌ ಇದ್ದರು.

ಕೋಲಾರ ಜಿಲ್ಲೆಯಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ಕೈಗೊಂಡಿರುವ ಯೋಜನೆಗಳ ಪ್ರಗತಿ ಸಾಧನೆಯು ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹ ಯಶಸ್ಸು ಕಂಡಿವೆ.
– ಎಂ.ರಾಮಪ್ಪ, ಅಧ್ಯಕ್ಷ ರಾಜ್ಯ ಭೋವಿ ಅಭಿವೃದ್ಧಿ ನಿಗಮ
ಕಲ್ಲು ಕುಟುಕರಿಗೆ ಸದ್ಯದಲ್ಲೇ ಅನುಮತಿ
ಜಿಲ್ಲೆಯಲ್ಲಿ ಕಲ್ಲು ಕುಟುಕರಿಂದ ನೂರಾರು ಅರ್ಜಿಗಳು ಬಂದಿವೆ. ಭೋವಿಗಳು ಅಲ್ಲದೇ ಬೇರೆ ಸಮುದಾಯದವರೂ ಇದ್ದಾರೆ. ಸದ್ಯದಲ್ಲೇ ಸಭೆ ನಡೆಸಿ ಅಂತಿಮ ಅನುಮೋದನೆ ನೀಡಲಾಗುವುದು. ನಿಯಮ ಪ್ರಕಾರವೇ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಹೇಳಿದರು. ನಿಗಮದ ಅಧ್ಯಕ್ಷ ರಾಮಪ್ಪ ಮಾತನಾಡಿ ತಾಂತ್ರಿಕ ಸಮಸ್ಯೆ ಇದ್ದು ಅದನ್ನು ಬಗೆಹರಿಸಿ ಈ ತಿಂಗಳಾಂತ್ಯದಲ್ಲಿ ಅನುಮತಿ ಕೊಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ಜಿಲ್ಲೆಗೆ ಅನುದಾನ ಹೆಚ್ಚಳ

2025-26ರಲ್ಲಿ ಹೆಚ್ಚಿನ ಗುರಿ ನಿಗದಿಪಡಿಸಿದ್ದು ಭೋವಿ ಸಮುದಾಯದವರ ಸ್ವಾವಲಂಬನೆ ಉದ್ಯೋಗಾವಕಾಶ ಮತ್ತು ಕೃಷಿ ಆಧಾರಿತ ಅಭಿವೃದ್ಧಿಗೆ ನಿಗಮವು ಹೆಚ್ಚಿನ ಒತ್ತು ನೀಡಿದೆ ಎಂದು ರಾಮಪ್ಪ ಹೇಳಿದರು. ಕಳೆದ ವರ್ಷ ಈ ಜಿಲ್ಲೆಗೆ ಕೇವಲ ₹ 1.25 ಕೋಟಿ ಅನುದಾನ ಇತ್ತು. ಈ ವರ್ಷ ಅನುದಾನ ಹೆಚ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 445 ಫಲಾನುಭವಿಗಳಿಗೆ ₹ 7.13 ಕೋಟಿ ಆರ್ಥಿಕ ನೆರವು ನೀಡುವ ಗುರಿ ನಿಗದಿಪಡಿಸಲಾಗಿದೆ ಎಂದರು. ರಾಜ್ಯ ಭೋವಿ ಅಭಿವೃದ್ಧಿ ನಿಗಮವು ಕೋಲಾರ ಜಿಲ್ಲೆಯಲ್ಲಿ ಭೋವಿ ಸಮುದಾಯದ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

10 ಸಾವಿರ ಚದರಡಿ ಜಾಗ

ಭೋವಿ ನಿಗಮದ ಜಿಲ್ಲಾ ಕಚೇರಿ ಕಾರ್ಯಗಳಿಗೆ ಮತ್ತು ಸಮುದಾಯದ ಅನುಕೂಲಕ್ಕಾಗಿ ಕೋಲಾರ ಹೊರವಲಯದ ಕುಂಬಾರಹಳ್ಳಿಯಲ್ಲಿ 10 ಸಾವಿರ ಚದರ ಅಡಿ ಭೂಮಿಯನ್ನು ₹ 55.81 ಲಕ್ಷ ವೆಚ್ಚದಲ್ಲಿ ಈಗಾಗಲೇ ಖರೀದಿಸಿದ್ದು ವೀಕ್ಷಿಸಿದ್ದೇನೆ ಎಂದು ರಾಮಪ್ಪ ಹೇಳಿದರು. ಸದ್ಯ ನಿಗಮದ ಕಚೇರಿ ಜಿಲ್ಲಾಡಳಿತ ಭವನದಲ್ಲಿ 2020ರಿಂದ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲಾ ವ್ಯವಸ್ಥಾಪಕಿ ಎನ್‌.ವಿಜಯಲಕ್ಷ್ಮಿ ಮತ್ತು ಇಬ್ಬರು ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ನಿಗಮದ ಅಧ್ಯಕ್ಷ ರಾಮಪ್ಪ ಸಂಸದ ಎಂ.ಮಲ್ಲೇಶ್‌ ಬಾಬು ಜೊತೆ ಕೂಡ ಚರ್ಚಿಸಿದರು.