ADVERTISEMENT

ವಿಫಲ ಕೊಳವೆಬಾವಿಗೂ ಬಿಲ್‌ ಪಾವತಿ; ಅನುದಾನ ಕುಂಠಿತ

ಅಧಿವೇಶನದಲ್ಲಿ ಚರ್ಚೆ– ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 12 ಮೇ 2020, 16:28 IST
Last Updated 12 ಮೇ 2020, 16:28 IST
ಮಾಲೂರು ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಡಿಯುವ ನೀರು ಸರಬರಾಜಿಗೆ ವಿದ್ಯುತ್ ಸಂಪರ್ಕ ಹಾಗೂ ಬೆಸ್ಕಾಂ ಗುತ್ತಿಗೆದಾರರ ಸಮಸ್ಯೆಗಳ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಮಾಲೂರು ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಡಿಯುವ ನೀರು ಸರಬರಾಜಿಗೆ ವಿದ್ಯುತ್ ಸಂಪರ್ಕ ಹಾಗೂ ಬೆಸ್ಕಾಂ ಗುತ್ತಿಗೆದಾರರ ಸಮಸ್ಯೆಗಳ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು   

ಮಾಲೂರು: ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಯೋಜನೆ ಅಡಿ ಕೊರೆಯಿಸಿರುವ ಕೊಳವೆಬಾವಿಗಳಲ್ಲಿ ನೀರು ವಿಫಲವಾದರೂ ಸರ್ಕಾರದಿಂದ ಬರುವ ವಿದ್ಯುತ್ ಬಿಲ್ ಅನ್ನು ಗ್ರಾಮ ಪಂಂಚಾಯಿತಿಗಳೆ ಪಾವತಿಸುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕುಂಠಿತವಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಬೆಸ್ಕಾಂ ಕಚೇರಿಯ ನೌಕರರ ಸಂಭಾಗಣದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರು ಸರಬರಾಜಿಗೆ ವಿದ್ಯುತ್ ಸಂಪರ್ಕ ಹಾಗೂ ಬೆಸ್ಕಾಂ ಗುತ್ತಿಗೆದಾರರ ಸಮಸ್ಯೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರು ಸರಬರಾಜು ಹಾಗೂ ಗ್ರಾಮ ನೈರ್ಮಲ್ಯ ಇಲಾಖೆ 14ನೇ ಹಣಕಾಸು ಯೋಜನೆಯಡಿ ಕೊರೆಯಿಸಿರುವ 528 ಕೊಳವೆ ಬಾವಿಗಳು ಕ್ರೀಯಾಶೀಲವಾಗಿವೆ. ಆದರೆ, 1,540 ಕೊಳವೆ ಬಾವಿಗಳಿಗೆ ವಿದ್ಯುತ್ ಬಿಲ್ ಪಾವತಿಯಾಗುತ್ತಿದೆ. ನೀರು ವಿಫಲವಾದ 937 ಕೊಳವೆ ಬಾವಿಗಳಿಗೂವಿದ್ಯುತ್ ಬಿಲ್ ಪಾವತಿ ಆಗುತ್ತಿರುವುದರಿಂದ ಅನುದಾನ ಕುಂಠಿತವಾಗುತ್ತಿದೆ. ಈ ಬಗ್ಗೆ ಮುಂಬರುವ ವಿಧಾನ ಸಭಾ ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ADVERTISEMENT

ಗ್ರಾ.ಪಂ ಹಾಗೂ ಕುಡಿಯುವ ನೀರು ಸರಬರಾಜು ಹಾಗೂ ಗ್ರಾಮ ನೈರ್ಮಲ್ಯ ಇಲಾಖೆ ಅಧಿಕಾರಿಗಳು ನೀರು ವಿಫಲವಾದ ಕೊಳವೆ ಬಾವಿಗಳ ಮಾಹಿತಿಯನ್ನು ಬೆಸ್ಕಾಂ ಅಧಿಕಾರಿಗಳಿಗೆ ನೀಡುವ ಮೂಲಕ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಬೇಕು ಎಂದು ಹೇಳಿದರು.

ಪಟ್ಟಣ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ವ್ಯತ್ಯಯ ಆಗದಂತೆ ಬೆಸ್ಕಾಂ ಅಧಿಕಾರಿಗಳು 7 ಗಂಟೆ ವಿದ್ಯುತ್ ಸರಬರಾಜಿಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಬೆಸ್ಕಾಂ ಇಲಾಖೆಯ ಕೆಜಿಎಫ್ ವಲಯದ ಎಸ್.ಸಿ.ಗುರುಸ್ವಾಮಿ, ಇಒ ಕೃಷ್ಣಪ್ಪ, ಎ.ಇ.ಅಶೋಕ ಕುಮಾರ್, ವರ್ಕ್ ಯೂನಿಟ್ ಎಇಇ ವೆಂಕಟೇಶಪ್ಪ, ಎಇಇ ಅನ್ಸರ್ ಪಾಶ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಮುಖ್ಯಾಧಿಕಾರಿ ಪ್ರಸಾದ್, ಜಿ.ಪಂ. ಕುಡಿಯುವ ನೀರು ಸರಬರಾಜು ಗ್ರಾಮ ನೈರ್ಮಲ್ಯ ಇಲಾಖೆಯ ಎಇಇ ನಾರಾಯಣಸ್ವಾಮಿ, ಬೆಸ್ಕಾಂ ಜೆ.ಇ.ದಿವ್ಯಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.