ADVERTISEMENT

ಬಂಡವಾಳಶಾಹಿಗಳಿಗೆ ಬಿಜೆಪಿ ಮಣೆ: ಕೆ.ಚಂದ್ರಾರೆಡ್ಡಿ

ಅರಸು ಜಯಂತಿಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಾರೆಡ್ಡಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 14:02 IST
Last Updated 20 ಆಗಸ್ಟ್ 2020, 14:02 IST
ಕೋಲಾರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಗುರುವಾರ ರಾಜೀವ್‌ಗಾಂಧಿ ಮತ್ತು ದೇವರಾಜ ಅರಸು ಜಯಂತಿ ಆಚರಿಸಲಾಯಿತು.
ಕೋಲಾರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಗುರುವಾರ ರಾಜೀವ್‌ಗಾಂಧಿ ಮತ್ತು ದೇವರಾಜ ಅರಸು ಜಯಂತಿ ಆಚರಿಸಲಾಯಿತು.   

ಕೋಲಾರ: ‘ದೇವರಾಜ ಅರಸು ಅವರು ಉಳುವವನೇ ಭೂ ಒಡೆಯ ಎಂದು ಘೋಷಿಸಿ ಬಡ ರೈತರಿಗೆ ಭೂಮಿ ನೀಡಿದರು. ಆದರೆ, ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಬೀದಿಪಾಲು ಮಾಡಲು ಹೊರಟಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ವಾಗ್ದಾಳಿ ನಡೆಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಗುರುವಾರ ನಡೆದ ರಾಜೀವ್‌ಗಾಂಧಿ ಮತ್ತು ದೇವರಾಜ ಅರಸು ಜಯಂತಿಯಲ್ಲಿ ಮಾತನಾಡಿ, ‘ಬಿಜೆಪಿ ಸರ್ಕಾರ ರೈತರ ಹಿತ ಕಡೆಗಣಿಸಿ ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುತ್ತಿದೆ’ ಎಂದು ಟೀಕಿಸಿದರು.

‘ಮೋದಿ ಆಡಳಿತದಲ್ಲಿ ದೇಶವು ಹಿನ್ನಡೆ ಅನುಭವಿಸಿದ್ದು, ಆರ್ಥಿಕವಾಗಿ ದಿವಾಳಿ ಹಂತ ತಲುಪಿದೆ. ವಿದೇಶಿ ಕೈಗಾರಿಕೆಗಳು ದೇಶದಿಂದ ಹೊರ ಹೋಗುತ್ತಿವೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿದ್ದು, ಸೋಂಕು ತಡೆಗೆ ಸರ್ಕಾರ ವಿಫಲವಾಗಿದೆ. ಸಾರ್ವಜನಿಕರು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಹಣ ದುರ್ಬಳಕೆಯಾಗಿದೆ’ ಎಂದು ಆರೋಪಿಸಿದರು.

ADVERTISEMENT

ಬಡವರ ಸುಲಿಗೆ: ‘ಕೋವಿಡ್‌ ಸಂಕಷ್ಟದಲ್ಲಿ ಬಡ ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸತ್ತವರ ಹೆಣ ನೀಡದೆ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ. ಔಷಧಗಳು ಹಾಗೂ ವೈದ್ಯಕೀಯ ಸಲಕರಣೆ ಖರೀದಿ ನೆಪದಲ್ಲಿ ತೆರಿಗೆ ಹಣ ಲೂಟಿ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್‌ ಕಿಸಾನ್‌ ಖೇತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌ ದೂರಿದರು.

‘ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ ಆಡಳಿತಾವಧಿಯಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿ ಸಾಧಿಸಿತು. ಆದರೆ, ಮೋದಿ ಆಡಳಿತಾವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ಬಡ ಜನರು, ಕಾರ್ಮಿಕರು, ರೈತರು ಬದುಕು ಬರ್ಬರವಾಗಿದೆ’ ಎಂದು ಹೇಳಿದರು.

ಭ್ರಷ್ಟಾಚಾರ: ‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತಂದ ಜನರು ಪಶ್ಚಾತಾಪ ಪಡುತ್ತಿದ್ದಾರೆ. ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ಜನರು ಮುಂದಿನಾ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಎ.ಮಂಜುನಾಥ್ ಗುಡುಗಿದರು.

ಕಾಂಗ್ರೆಸ್‌ ಕಿಸಾನ್‌ ಖೇತ್‌ ರಾಜ್ಯ ಘಟಕದ ಅಧ್ಯಕ್ಷ ಸಚಿನ್ ಮಿಗಾ, ಪಕ್ಷದ ಮುಖಂಡರು, ನಗರಸಭೆ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.