ADVERTISEMENT

ಬ್ಯಾಂಕ್‌ ಅಕ್ರಮಗಳ ಕೂಪ: ಮಾಜಿ ಶಾಸಕ ಸಂಪಂಗಿ ಗಂಭೀರ ಆರೋಪ

ಡಿಸಿಸಿ ಬ್ಯಾಂಕ್‌ ಎದುರು ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 14:59 IST
Last Updated 27 ಅಕ್ಟೋಬರ್ 2021, 14:59 IST
ಡಿಸಿಸಿ ಬ್ಯಾಂಕ್‌ ಕೋಟ್ಯಂತರ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕೆಜಿಎಫ್‌ನ ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಕೋಲಾರದಲ್ಲಿ ಬುಧವಾರ ಬ್ಯಾಂಕ್‌ನ ಎದುರು ಪ್ರತಿಭಟನೆ ಮಾಡಿದರು
ಡಿಸಿಸಿ ಬ್ಯಾಂಕ್‌ ಕೋಟ್ಯಂತರ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕೆಜಿಎಫ್‌ನ ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಕೋಲಾರದಲ್ಲಿ ಬುಧವಾರ ಬ್ಯಾಂಕ್‌ನ ಎದುರು ಪ್ರತಿಭಟನೆ ಮಾಡಿದರು   

ಕೋಲಾರ: ಡಿಸಿಸಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕೆಜಿಎಫ್‌ನ ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಇಲ್ಲಿ ಬುಧವಾರ ಬ್ಯಾಂಕ್‌ನ ಎದುರು ಪ್ರತಿಭಟನೆ ಮಾಡಿದರು.

ಟಿ.ಚನ್ನಯ್ಯ ರಂಗಮಂದಿರದಿಂದ ಬ್ಯಾಂಕ್‌ನ ಕೇಂದ್ರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪಕ್ಷದ ಕಾರ್ಯಕರ್ತರು ಬ್ಯಾಂಕ್‌ನ ಅಧ್ಯಕ್ಷ ಎಂ.ಗೋವಿಂದಗೌಡ ಮತ್ತು ಕೆಜಿಎಫ್‌ನ ಕಾಂಗ್ರೆಸ್‌ ಶಾಸಕ ಎಂ.ರೂಪಕಲಾ ವಿರುದ್ಧ ಧಿಕ್ಕಾರ ಕೂಗಿದರು.

‘ಡಿಸಿಸಿ ಬ್ಯಾಂಕ್‌ನಲ್ಲಿ ₹ 500 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದ್ದು, ತನಿಖೆಗೆ ಮುಂದಾದ ಅಧಿಕಾರಿಗಳ ಮೇಲೆ ಬ್ಯಾಂಕ್ ಅಧ್ಯಕ್ಷರು ದೌರ್ಜನ್ಯ ನಡೆಸುತ್ತಿದ್ದಾರೆ. ಬ್ಯಾಂಕ್ ಅಕ್ರಮಗಳ ಕೂಪವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆಗೆ ಬರುವ ಅಧಿಕಾರಿಗಳ ಮೇಲೆ ಅಧ್ಯಕ್ಷರು ದೌರ್ಜನ್ಯ ನಡೆಸಿ ತಮಗೆ ಬೇಕಾದ ರೀತಿ ತನಿಖಾ ವರದಿ ಬರೆಸುತ್ತಿದ್ದಾರೆ’ ಎಂದು ಸಂಪಂಗಿ ಆರೋಪಿಸಿದರು.

ADVERTISEMENT

‘ಡಿಸಿಸಿ ಬ್ಯಾಂಕ್‌ನ ಅವ್ಯವಹಾರದ ಬಗ್ಗೆ ಸರ್ಕಾರ ಉನ್ನತ ತನಿಖೆಗೆ ಆದೇಶಿಸಬೇಕು. ಅಕ್ರಮ ನಡೆಸಿರುವ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಬೇಕು. ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ ಬ್ಯಾಂಕ್‌ ಉಳಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆ ನಾಟಕ: ‘ಕೆಜಿಎಫ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ವಿಭಜನೆ ವಿಚಾರವಾಗಿ ಸಹಕಾರ ಇಲಾಖೆ ಉಪ ನಿಬಂಧಕರ ಕಚೇರಿ ಎದುರು ಶಾಸಕಿ ರೂಪಕಲಾ ಅವರು 2 ದಿನ ನಡೆಸಿದ ಪ್ರತಿಭಟನೆಯು ಕೇವಲ ನಾಟಕ. ಪ್ರತಿಭಟನೆಯಲ್ಲಿ ನಿಜವಾದ ರೈತರು ಭಾಗವಹಿಸಿರಲಿಲ್ಲ. ಬದಲಿಗೆ ಬಾರ್‌ ಮಾಲೀಕರು, ನೀಲಗಿರಿ ತೋಪುಗಳಲ್ಲಿ ಜೂಜಾಡುವವರು ಭಾಗಿಯಾಗಿದ್ದರು’ ಎಂದು ಟೀಕಿಸಿದರು.

‘2018ರ ವಿಧಾನಸಭಾ ಚುನಾವಣೆಗೂ ಮುನ್ನ ರೂಪಕಲಾ ಅವರು ಡಿಸಿಸಿ ಬ್ಯಾಂಕ್‌ನ ಹಣವನ್ನು ಸಾಲವಾಗಿ ನೀಡುವಾಗ ಅರಿಶಿನ ಕುಂಕುಮದ ಜತೆ ಹಣ ಕೊಟ್ಟು ದೇವಸ್ಥಾನದ ಮುಂದೆ ಆಣೆ ಮಾಡಿಸಿಕೊಂಡಿದ್ದಾರೆ. ಶಾಸಕರೇ ಅಧಿಕಾರ ಶಾಶ್ವತವಲ್ಲ. ಅಡ್ಡದಾರಿ ಮೂಲಕ ಶಾಸಕರಾಗಿ ಆಯ್ಕೆಯಾದ ರೂಪಕಲಾ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರೇ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರ ಸೋಲು ಖಚಿತ’ ಎಂದು ವ್ಯಂಗ್ಯವಾಡಿದರು.

‘ಬ್ಯಾಲಹಳ್ಳಿ ಗೋವಿಂದಗೌಡರು ದೊಡ್ಡ ಅವಕಾಶವಾದಿ. ರೂಪಕಲಾ ಅವರೇ ಈಗಲಾದರೂ ಎಚ್ಚೆತ್ತು ನಿಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಮುಂದೆ ಸಾಗಿ’ ಎಂದು ಕುಟುಕಿದರು.

ಆಟ ನಡೆಯಲ್ಲ: ‘ಲೆಕ್ಕ ಪರಿಶೋಧಕರು, ಅಫೆಕ್ಸ್‌ ಬ್ಯಾಂಕ್‌ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಡಿಸಿಸಿ ಬ್ಯಾಂಕ್‌ನಲ್ಲಿ ಈವರೆಗೆ ಅವ್ಯವಹಾರ ನಡೆಸಿದ್ದು ಸಾಕು. ಇನ್ನು ಮುಂದೆ ನಿಮ್ಮ ಆಟ ನಡೆಯಲ್ಲ. ವಿಧಾನಸಭಾ ಉಪ ಚುನಾವಣೆ ಬಳಿಕ ಬ್ಯಾಂಕ್‌ನ ಅಕ್ರಮದ ತನಿಖೆಗೆ ವಿಶೇಷ ತಂಡ ರಚನೆಯಾಗಲಿದೆ’ ಎಂದು ಡಿಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಹನುಮೇಗೌಡ ಹೇಳಿದರು.

‘ಕೆಜಿಎಫ್‌ನಲ್ಲಿ ಒಂದೇ ರಾತ್ರಿಗೆ 150 ಸಂಘ ರಚಿಸಿ ₹ 25 ಕೋಟಿ ಹಂಚಲಾಗಿದೆ. ಬ್ಯಾಂಕ್‌ನ ಅವ್ಯವಹಾರಗಳ ಬಗ್ಗೆ ಒಂದು ಹಂತದವರೆಗೆ ತನಿಖೆ ನಡೆದಿದ್ದು, ಕೆಲ ಅಕ್ರಮಗಳು ಸಾಬೀತಾಗಿವೆ. ಅಧ್ಯಕ್ಷರು ತನಿಖಾ ತಂಡದ ಅಧಿಕಾರಿಗಳನ್ನೇ ರೆಸಾರ್ಟ್‌ಗೆ ಕರೆಸಿಕೊಂಡು ಮದ್ಯ ಕುಡಿಸಿ ಕಳುಹಿಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಕೃಷ್ಣಮೂರ್ತಿ, ಜಯರಾಮರೆಡ್ಡಿ, ಮುನಿಯಪ್ಪ ಹಾಗೂ ಕಾರ್ಯಕರ್ತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.