ADVERTISEMENT

ಕೋಲಾರ: ಕಾರಣ ನೀಡದೆ ಬಿಜೆಪಿ ವಿಜಯಸಂಕಲ್ಪ ಯಾತ್ರೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 15:51 IST
Last Updated 12 ಮಾರ್ಚ್ 2023, 15:51 IST
   

ಕೋಲಾರ: ನಗರದಲ್ಲಿ ಭಾನುವಾರ ನಡೆಯಬೇಕಿದ್ದ ಕೋಲಾರ ಕ್ಷೇತ್ರದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ಯಾವುದೇ ಕಾರಣವಿಲ್ಲದೆ ದಿಢೀರನೇ ಮುಂದೂಡಲಾಗಿದೆ.

ಮಾಲೂರು ಪಟ್ಟಣದಲ್ಲಿ ರ‍್ಯಾಲಿ ನಡೆಸಿ ಬಳಿಕ ಕೋಲಾರ ತಾಲ್ಲೂಕಿನ ವಕ್ಕಲೇರಿ, ಪಾಶ್ರ್ವಗಾನಹಳ್ಳಿ, ಛತ್ರಕೋಡಿಹಳ್ಳಿ ಮಾರ್ಗವಾಗಿ ಯಾತ್ರೆ ನಗರಕ್ಕೆ ಬಂತು. ಅಷ್ಟರಲ್ಲಿ ಪಕ್ಷದ ಮುಖಂಡರು ವಾಪಸ್‌ ತೆರಳಿದರು.

ಇತ್ತ ನಗರದ ಬೈರೇಗೌಡ ಬಡಾವಣೆಯ ಬಳಿಯ ಮೈದಾನದಲ್ಲಿ ಬೃಹತ್‌ ವೇದಿಕೆ ಸಿದ್ಧಪಡಿಸಿ ಸಾವಿರಾರು ಕುರ್ಚಿಗಳನ್ನು ಹಾಕಲಾಗಿತ್ತು. ನಗರದೆಲ್ಲೆಡೆ ಬಿಜೆಪಿ ಬಾವುಟಗಳು, ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಸಂಜೆ 5 ಗಂಟೆಗೆ ಪಕ್ಷದ ಸಾರ್ವಜನಿಕ ಸಭೆ ಆರಂಭವಾಗಬೇಕಿತ್ತು. ಆ ಸಮಯದಲ್ಲಿ ಜನರಿಲ್ಲದೆ ಕುರ್ಚಿಗಳು ಖಾಲಿ ಬಿದ್ದಿದ್ದವು. ಇತ್ತ ಯಾತ್ರೆಯೂ ನಿಗದಿಗಿಂತ ಎರಡು ಗಂಟೆ ತಡವಾಯಿತು.

ADVERTISEMENT

ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತುರ್ತು ಕಾರ್ಯಕ್ರಮದ ನಿಮಿತ್ತ ನವದೆಹಲಿಗೆ ವಾಪಸ್ಸಾದರು ಎಂಬುದು ಗೊತ್ತಾಗಿದೆ. ಇತ್ತ ಸಚಿವ ಆರ್‌.ಅಶೋಕ ಬೆಂಗಳೂರಿನಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಜಿಲ್ಲಾ ಬಿಜೆಪಿಯು, ‘ಕಾರ್ಯಕ್ರಮ ಮುಂದೂಡಲಾಗಿದೆ’ ಎಂದಷ್ಟೇ ಹೇಳಿದ್ದು, ಯಾವುದೇ ಅಧಿಕೃತ ಕಾರಣ ನೀಡಿಲ್ಲ.

ಯಾತ್ರೆಯಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಯಾತ್ರೆಯ ಸಂಚಾಲಕ ಸಚ್ಚಿದಾನಂದಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.