ADVERTISEMENT

ನರಸಾಪುರ ಗ್ರಾ.ಪಂ ಸದಸ್ಯರಿಗೆ ಬೌನ್ಸರ್‌ ರಕ್ಷಣೆ: ಆತಂಕ

ಅಧ್ಯಕ್ಷ–ಉಪಾಧ್ಯಕ್ಷಗಾದಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:21 IST
Last Updated 8 ಫೆಬ್ರುವರಿ 2021, 17:21 IST
ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸದಸ್ಯರನ್ನು ಸೋಮವಾರ ಬೌನ್ಸರ್‌ಗಳ ರಕ್ಷಣೆಯಲ್ಲಿ ಕರೆತರಲಾಯಿತು.
ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸದಸ್ಯರನ್ನು ಸೋಮವಾರ ಬೌನ್ಸರ್‌ಗಳ ರಕ್ಷಣೆಯಲ್ಲಿ ಕರೆತರಲಾಯಿತು.   

ಕೋಲಾರ: ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆಗೆ ಸೋಮವಾರ ಸದಸ್ಯರ ಭದ್ರತೆಗಾಗಿ ಬೌನ್ಸರ್‌ಗಳನ್ನು ಕರೆತಂದಿದ್ದರಿಂದ ಗ್ರಾಮದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗ್ರಾ.ಪಂ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಪ್ರಕ್ರಿಯೆ ಆರಂಭದ ಸಮಯಕ್ಕೆ ಸರಿಯಾಗಿ 10 ಮಂದಿ ಸದಸ್ಯರನ್ನು ವಾಹನವೊಂದರಲ್ಲಿ ಗ್ರಾ.ಪಂ ಕರೆತರಲಾಯಿತು. ಅವರ ವಾಹನ ಹಿಂಬಾಲಿಸಿ ಮತ್ತೊಂದು ವಾಹನದಲ್ಲಿ ಬಂದ 10 ಬೌನ್ಸರ್‌ಗಳು ಏಕಾಏಕಿ ಗ್ರಾ.ಪಂ ಪ್ರವೇಶಿಸಲು ಯತ್ನಿಸಿದರು.

ಆಗ ಪೊಲೀಸರು ಬೌನ್ಸರ್‌ಗಳಿಗೆ ಗ್ರಾ.ಪಂ ಕಚೇರಿಯ ಪ್ರವೇಶ ಭಾಗದಲ್ಲೇ ತಡೆಯೊಡ್ಡಿದರು. ಆದರೆ, ಬೌನ್ಸರ್‌ಗಳು ಪೊಲೀಸರನ್ನು ತಳ್ಳಿ ಒಳ ನುಗ್ಗಲು ಯತ್ನಿಸಿದರು. ಇದರಿಂದ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪೊಲೀಸರು ಬೌನ್ಸರ್‌ಗಳ ಮೇಲೆ ಲಾಠಿ ಬೀಸಿದರು. ಇದರಿಂದ ಗಾಬರಿಯಾದ ಬೌನ್ಸರ್‌ಗಳು ಗ್ರಾ.ಪಂ ಕಚೇರಿಯಿಂದ ದೂರ ಹೋದರು.

ADVERTISEMENT

ಸದಸ್ಯರನ್ನು ಸೆಳೆಯುವ ವಿಚಾರವಾಗಿ 2 ಗುಂಪುಗಳ ನಡುವ ಜಟಾಪಟಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಗ್ರಾಮಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ಪೊಲೀಸರನ್ನು ಕರೆಸಿಕೊಂಡು ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.

ಚುನಾವಣಾ ಅಧಿಕಾರಿಯಾದ ಬಿಇಒ ಕೆ.ಎಸ್‌.ನಾಗರಾಜಗೌಡ ಅವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ 17 ಸದಸ್ಯರು ಭಾಗಿಯಾದರು. ಮುಖಂಡ ನವೀನ್ ಬೆಂಬಲಿತರಾದ ಸದಸ್ಯೆ ಸುಮಿತ್ರಾ ಅವರು ಅಧ್ಯಕ್ಷರಾಗಿ ಮತ್ತು ಸುಮನ್‌ ಚಂದ್ರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬೆಂಗಳೂರಿನ ಬೌನ್ಸರ್‌ಗಳು: ಬಿಜೆಪಿ ಮುಖಂಡ ನವೀನ್‌ ಅವರು ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶಕ್ಕೆ ಬೆಂಗಳೂರಿನಿಂದ ಬೌನ್ಸರ್‌ಗಳನ್ನು ಕರೆಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯರನ್ನು ಬೆಂಗಳೂರಿಗೆ ಕರೆದೊಯ್ದಿದ್ದ ಅವರು ಬೆಳಿಗ್ಗೆ ಅಲ್ಲಿಂದ ಬೌನ್ಸರ್‌ಗಳ ಭದ್ರತೆಯಲ್ಲಿ ನರಸಾಪುರಕ್ಕೆ ಕರೆತಂದರು ಎಂದು ವೇಮಗಲ್‌ ಪೊಲೀಸರು ತಿಳಿಸಿದ್ದಾರೆ.

‘ಗ್ರಾ.ಪಂ ಎದುರು ಎದುರಾಳಿ ಗುಂಪಿನವರು ನಮ್ಮ ಗುಂಪಿನ ಸದಸ್ಯರನ್ನು ತಡೆದು ಗಲಾಟೆ ಮಾಡುವ ಸಾಧ್ಯತೆಯಿತ್ತು. ಈ ಕಾರಣಕ್ಕಾಗಿ ಬೌನ್ಸರ್‌ಗಳ ರಕ್ಷಣೆಯಲ್ಲಿ ನಮ್ಮ ಸದಸ್ಯರನ್ನು ಗ್ರಾ.ಪಂಗೆ ಕರೆತಂದೆವು’ ಎಂದು ನವೀನ್‌ರ ಬೆಂಬಲಿಗರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.