ADVERTISEMENT

ಆಂಧ್ರದಲ್ಲಿ ಬುದ್ಧನ ವಿಗ್ರಹ ಶಿರಚ್ಛೇದ: ಆಕ್ರೋಶ

ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ದಲಿತ ಮುಖಂಡರ ಆಗ್ರಹ, ದೇಶದಾದ್ಯಂತ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 8:02 IST
Last Updated 24 ಆಗಸ್ಟ್ 2025, 8:02 IST
ಆಂಧ್ರದಲ್ಲಿ ಬುದ್ಧನ ವಿಗ್ರಹ ಶಿರಚ್ಛೇದ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶ್ರೀನಿವಾಸಪುರದಲ್ಲಿ ಶನಿವಾರ ಮುಖಂಡರು ಸಭೆ ನಡೆಸಿ ಬುದ್ಧನ ವಿಗ್ರಹ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಆಂಧ್ರದಲ್ಲಿ ಬುದ್ಧನ ವಿಗ್ರಹ ಶಿರಚ್ಛೇದ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶ್ರೀನಿವಾಸಪುರದಲ್ಲಿ ಶನಿವಾರ ಮುಖಂಡರು ಸಭೆ ನಡೆಸಿ ಬುದ್ಧನ ವಿಗ್ರಹ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು    

ಶ್ರೀನಿವಾಸಪುರ: ತಾಲ್ಲೂಕಿನ ಪಕ್ಕದ ಮದನಪಲ್ಲಿ ಬಳಿ ಬುದ್ಧನ ಬೆಟ್ಟದಲ್ಲಿ ಬುದ್ಧನ ವಿಗ್ರಹದ ಶಿರಚ್ಛೇದ ಮಾಡಿರುವ ಆರೋಪಿಗಳನ್ನು ಆಂಧ್ರ ಪ್ರದೇಶದ ಸರ್ಕಾರ ಕೂಡಲೇ ಬಂಧಿಸಬೇಕೆಂದು ದಲಿತ ಮುಖಂಡರು ಅಗ್ರಹಿಸಿದ್ದಾರೆ.

ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಶನಿವಾರ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಆಶ್ರಯದಲ್ಲಿ ನಡೆದ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಗಿದೆ.

ಸಭೆಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ‘ಈ ಹೇಯ ಕೃತ್ಯ ಎಸಗಿರುವವರನ್ನು ಬಂಧಿಸುವವರೆಗೆ ಹೋರಾಟಕ್ಕೆ ಕೈಜೋಡಿಸುತ್ತೇವೆ. ಈ ಹಿಂದೆ ಕೆಲ ಸಂಘಟನೆಗಳ ವಿರುದ್ಧ 2 ಸಾವಿರ ಜನ ಸೇರಿ ಹೋರಾಟ ಮಾಡಿದ್ದೆವು. ಆಂಧ್ರ ಸರ್ಕಾರ ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದ ಪಕ್ಷದಲ್ಲಿ 20 ಸಾವಿರ ಜನ ಸೇರಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಭಾರತೀಯ ಅಂಬೇಡ್ಕರ್ ಸೇನಾ ಆಂಧ್ರಪ್ರದೇಶದ ರಾಜ್ಯಾಧ್ಯಕ್ಷ ಪಿಟಿಎಂ ಶಿವಪ್ರಸಾದ್ ಮಾತನಾಡಿ, ‘ಆಂಧ್ರ ಸರ್ಕಾರ ಸಂವಿಧಾನ ಬದ್ಧ ಮಾನವ ಹಕ್ಕುಗಳನ್ನು ದಮನ ಮಾಡುತ್ತಿದೆ. ಬುದ್ಧನ ಶಿರಚ್ಛೇದ ಮಾಡಿರುವವರನ್ನು ಬಂಧಿಸುವಲ್ಲಿ ಆಂಧ್ರ ಪೊಲೀಸರು ವಿಫಲವಾಗಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ದಲಿತ ಸಂಘಟನೆಗಳು ಹೋರಾಟ ಮಾಡಲಿವೆ’ ಎಂದರು.

ಅಂತರರಾಜ್ಯ ಸಂಘಟನಾ ಸಂಚಾಲಕ ಎನ್.ಮುನಿಸ್ವಾಮಿ ಮಾತನಾಡಿ, ‘ದೇಶವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ. ಮತದಾರರಿಂದ ರಚನೆಯಾದ ಯಾವುದೇ ಸರ್ಕಾರವಾಗಲಿ ಎಲ್ಲಾ ಸಮುದಾಯದ ಏಳಿಗೆಗಾಗಿ ದುಡಿಯಬೇಕಾಗಿದೆ. ಅನ್ನಮಯ್ಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಯಾವುದೋ ಕಾಣದ ಕೈಗಳ ಒತ್ತಡ ಇರಬೇಕು. ಇಲ್ಲವಾದರೆ ಕಾನೂನಿನ ಅರಿವಿಲ್ಲವೋ ಗೊತ್ತಾಗುತ್ತಿಲ್ಲ. ಅವರು ಬುದ್ಧನ ಜೀವನ ಚರಿತ್ರೆ ಓದುಬೇಕು’ ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಬುದ್ಧನ ವಿಗ್ರಹ ಪುನರ್‌ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.

ಬುದ್ಧನ ವಿಗ್ರಹ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಹಿಂದುಳಿದ ವಿಭಾಗದ ರಾಜ್ಯ ಸಂಘಟನಾ ಸಂಚಾಲಕ ಇಂದೂಧರ ಹೊನ್ನಾಪುರ, ರಾಜ್ಯ ಪದಾಧಿಕಾರಿಗಳಾದ ಎನ್.ವೆಂಕಟೇಶ್, ಗುರುಪ್ರಸಾದ್ ಕೆರಗೋಡು, ಮರಿಯಪ್ಪಹಳ್ಳಿ, ‌ಜಿಲ್ಲಾ ಪದಾಧಿಕಾರಿಗಳಾದ ಹಾರೋಹಳ್ಳಿ ರವಿ, ಸಿ.ಜೆ.ನಾಗರಾಜು, ಜಿಲ್ಲಾ ಸಂಘಟನಾ ಸಂಚಾಲಕ ಚಲ್ದಿಗಾನಹಳ್ಳಿ ಸಿ.ವಿ.ಮುನಿವೆಂಕಟಪ್ಪ, ತಾಲ್ಲೂಕು ಪದಾಧಿಕಾರಿಗಳಾದ ವಿ.ಮುನಿಯಪ್ಪ, ಟಿ.ಎಂ.ಮುಳವಾಗಲಪ್ಪ, ನಾಗದೇವಹಳ್ಳಿ ಎಂ.ಶ್ರೀನಿವಾಸ್, ಪಿ.ವಾಸು, ಎನ್.ನಾರಾಯಣಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.