ADVERTISEMENT

ಕೋಲಾರ: ಜಿಲ್ಲೆಯಲ್ಲಿ ಬಸ್‌ ಸೇವೆ ಆರಂಭ

ಸುರಕ್ಷತೆಗೆ ಒತ್ತು: ಅಂತರ ಕಾಯ್ದುಕೊಂಡು ಪ್ರಯಾಣ

​ಪ್ರಜಾವಾಣಿ ವಾರ್ತೆ
Published 19 ಮೇ 2020, 15:45 IST
Last Updated 19 ಮೇ 2020, 15:45 IST
ಕೋಲಾರದಲ್ಲಿ ಮಂಗಳವಾರದಿಂದ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭವಾಗಿದ್ದು, ಪ್ರಯಾಣಿಕರು ಅಂತರ ಕಾಯ್ದುಕೊಂಡು ಪ್ರಯಾಣಿಸಿದರು.
ಕೋಲಾರದಲ್ಲಿ ಮಂಗಳವಾರದಿಂದ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭವಾಗಿದ್ದು, ಪ್ರಯಾಣಿಕರು ಅಂತರ ಕಾಯ್ದುಕೊಂಡು ಪ್ರಯಾಣಿಸಿದರು.   

ಕೋಲಾರ: ರಾಜ್ಯ ಸರ್ಕಾರ ಬಸ್‌ ಸಂಚಾರಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ಸೇವೆ ಆರಂಭವಾಯಿತು.

ಪ್ರಯಾಣಿಕರು ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಬಸ್‌ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಬಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಪ್ರವೇಶ ದ್ವಾರಗಳನ್ನು ಬಂದ್ ಮಾಡಿ ಒಂದು ಗೇಟ್‌ ಮೂಲಕ ಮಾತ್ರ ಪ್ರಯಾಣಿಕರಿಗೆ ಪ್ರವೇಶ ನೀಡಲಾಯಿತು. ಸಿಬ್ಬಂದಿಯು ಪ್ರವೇಶ ದ್ವಾರದಲ್ಲೇ ಪ್ರತಿ ಪ್ರಯಾಣಿಕರ ದೇಹದ ಉಷ್ಣತೆ ಪರೀಕ್ಷಿಸಿದರು. ಜತೆಗೆ ಪ್ರಯಾಣಿಕರಿಗೆ ಸ್ಯಾನಿಟೈಸರ್‌ ನೀಡಿ ಕೈಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು.

ADVERTISEMENT

ಪ್ರಯಾಣಿಕರು ನಿಲ್ದಾಣಗಳ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಸಿದರು. ಟಿಕೆಟ್‌ ನೀಡಿಕೆಗೂ ಮುನ್ನ ಸಿಬ್ಬಂದಿಯು ಪ್ರಯಾಣಿಕರ ಹೆಸರು, ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ಸೇರಿದಂತೆ ಸಂಪೂರ್ಣ ವೈಯಕ್ತಿಕ ವಿವರ ದಾಖಲಿಸಿಕೊಂಡರು. ಕೆಎಸ್‌ಆರ್‌ಟಿಸಿ ಸಿಬ್ಬಂದಿಯು ಬಸ್‌ಗಳಿಗೆ ನಿಗದಿಪಡಿಸಿದ್ದ ಸಂಖ್ಯೆಯ ಪ್ರಯಾಣಿಕರನ್ನು ಬಸ್‌ಗಳಿಗೆ ಹತ್ತಿಸಿದರು. ಪ್ರತಿ ಬಸ್‌ನಲ್ಲಿ ಗರಿಷ್ಠ 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಯಿತು. ಪ್ರಯಾಣಿಕರೆಲ್ಲರೂ ಅಂತರ ಕಾಯ್ದುಕೊಂಡು ಮಾಸ್ಕ್‌ ಧರಿಸಿ ಪ್ರಯಾಣ ಮಾಡಿದರು.

ಬಸ್‌ ಸ್ಯಾನಿಟೈಸ್‌: ಬಸ್‌ ಚಾಲಕ ಹಾಗೂ ನಿರ್ವಾಹಕರು ಸಹ ಮಾಸ್ಕ್‌ ಧರಿಸಿದ್ದರು. ಬಸ್‌ಗಳು ಬೆಳಿಗ್ಗೆ ನಿಲ್ದಾಣಕ್ಕೆ ಬರುವ ಡಿಪೊಗಳಲ್ಲಿ ಸ್ಯಾನಿಟೈಸ್‌ಗೊಳಿಸಲಾಯಿತು. ಸಂಜೆ 5 ಗಂಟೆವರೆಗೂ ಬಸ್‌ಗಳು ಸಂಚರಿಸಿದವು. ಬಳಿಕ ರಾತ್ರಿ ಬಸ್‌ಗಳನ್ನು ಡಿಪೊಗೆ ತಂದು ಮತ್ತೊಮ್ಮೆ ಸ್ಯಾನಿಟೈಸ್‌ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.