ADVERTISEMENT

ಸಿ.ಎ ನಿವೇಶನ: ಶೀಘ್ರವೇ ದರ ಪಾವತಿಸಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:40 IST
Last Updated 9 ಜನವರಿ 2020, 14:40 IST

ಕೋಲಾರ: ‘ದೇವರಾಜ ಅರಸು ಬಡಾವಣೆಯಲ್ಲಿ ಸಾರ್ವಜನಿಕರ ಉದ್ದೇಶಕ್ಕೆ ಕಾಯ್ದಿರಿಸಿರುವ ಸಿ.ಎ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಇಲಾಖೆಗಳು ತಿಂಗಳೊಳಗೆ ರಿಯಾಯಿತಿ ದರ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಸಾರ್ವಜನಿಕ ಉದ್ದೇಶಕ್ಕೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ನಿವೇಶನ ನೀಡಲಾಗುತ್ತಿದೆ. ತೆರಿಗೆ ಇಲಾಖೆ, ನಿವೃತ್ತ ಸೈನಿಕ ಆಸ್ಪತ್ರೆ ಸೇರಿದಂತೆ ಹಲವು ಇಲಾಖೆಯವರು ಸಿ.ಎ ನಿವೇಶನಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಪಾವತಿಗೆ ವಿಳಂಬ ಮಾಡಿದರೆ ಕಾಯಲು ಆಗುವುದಿಲ್ಲ’ ಎಂದು ತಿಳಿಸಿದರು.

‘ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲು ಉದ್ದೇಶಿಸಿರುವ ಉದ್ಯಾನದ ಜಾಗದಲ್ಲಿ ಅನಧಿಕೃತವಾಗಿ ತೆರೆಯಲಾಗಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಆದರೂ ಕೆಲವರು ಮತ್ತೆ ರಸ್ತೆ ಪಕ್ಕ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಈ ಅಂಗಡಿಗಳನ್ನು ತೆರವುಗೊಳಿಸಲು ಹೋದಾಗ ಲ್ಯಾಂಕೊ ಕಂಪನಿಯವರ ಮೇಲೆ ಹೇಳಿದ್ದು, ಕಂಪನಿಯವರು ಕೂಡಲೇ ತೆರವುಗೊಳಿಸಬೇಕು’ ಎಂದು ಹೇಳಿದರು.

ADVERTISEMENT

‘ನಗರದ ವ್ಯಾಪ್ತಿಯಲ್ಲಿ 3 ಮೇಲ್ಸೆತುವೆ ನಿರ್ಮಿಸಲಾಗುತ್ತಿದೆ. ಈ ಪೈಕಿ 2 ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿವೆ’ ಎಂದು ಲ್ಯಾಂಕೊ ಕಂಪನಿ ಎಂಜಿನಿಯರ್ ರವಿಕುಮಾರ್ ವಿವರಿಸಿದರು.

ಜಾಗ ತೋರಿಸಿ: ‘ಆರ್.ಎಲ್.ಜಾಲಪ್ಪ ಆಸ್ಪತ್ರೆಯವರು ಉದ್ಯಾನ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಅಧಿಕಾರಿಗಳು ಅವರನ್ನು ಸಂರ್ಪಕಿಸಿ ಜಾಗ ತೋರಿಸಬೇಕು. ಲ್ಯಾಂಕೊ ಕಂಪನಿಯವರು ಹೆದ್ದಾರಿಯಲ್ಲಿ ಅಪಾಯದ ಸ್ಥಳಗಳನ್ನು ಗುರುತಿಸಿದ್ದೀರಿ. ಆದರೆ, ಅಪಘಾತ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಲ್ಯಾಂಕೊ ಕಂಪನಿ ಎಂಜಿನಿಯರ್ ರವಿಕುಮಾರ್, ‘ಪೊಲೀಸರು ಗುರುತಿಸಿರುವ ಹೆಚ್ಚು ಅಪಾಯಕಾರಿ ಜಾಗಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಇರುವ ಕಡೆ ಸೂಚನಾ ಫಲಕ ಸಹ ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಮೀಪ ಸರ್ವಿಸ್‌ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸದ್ಯದಲ್ಲೇ ಕೆಲಸ ಆರಂಭಿಸುತ್ತೇವೆ’ ಎಂದು ತಿಳಿಸಿದರು.

‘ಜಿಲ್ಲಾ ಮಟ್ಟದಲ್ಲಿ ಸಾರಿಗೆ ಪ್ರಾಧಿಕಾರವಿದೆ. ಪ್ರತಿ 3 ತಿಂಗಳಿಗೊಮ್ಮೆ ಪ್ರಾಧಿಕಾರದ ಸಭೆ ನಡೆಯುತ್ತದೆ. ಲ್ಯಾಂಕೊ ಕಂಪನಿ ಅಧಿಕಾರಿಗಳನ್ನು ಆಹ್ವಾನಿಸಿದರೂ ಕಿರಿಯ ಅಧಿಕಾರಿಗಳನ್ನು ಕಳುಹಿಸುತ್ತಾರೆ. ಸಭೆಗೆ ಬರಬೇಕೆಂಬ ಜವಾಬ್ದಾರಿಯಿಲ್ಲವೆ’ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.