ಕೋಲಾರ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮುಕ್ತಾಯಗೊಳ್ಳಲು ಇನ್ನು ಕೇವಲ 48 ಗಂಟೆ ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಈ ವರೆಗೆ ಶೇ 97ರಷ್ಟು ಸಮೀಕ್ಷೆ ನಡೆದಿದ್ದು, ಇನ್ನೂ ಸುಮಾರು 52 ಸಾವಿರ ಜನರಿಂದ ಮಾಹಿತಿ ಪಡೆಯಬೇಕಿದೆ.
ಸುಮಾರು 1.03 ಲಕ್ಷ ಜನರು (ಶೇ 6) ವಿವಿಧ ಕಾರಣಗಳಿಂದ ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ. ಕೆಲ ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿದ್ದರೆ, ಇನ್ನು ಕೆಲವರ ಮನೆಗಳಿಗೆ ಬೀಗ ಹಾಕಲಾಗಿದೆ. ಇನ್ನು ಕೆಲವರು ವಿವಿಧೆಡೆಗೆ ವಲಸೆ ಹೋಗಿದ್ದಾರೆ. ಕೆಲವರನ್ನು ಹುಡುಕಿ ಸಮೀಕ್ಷೆಗೆ ಒಳಪಡಿಸುವ ಸವಾಲು ಗಣತಿದಾರರಿಗೆ ಎದುರಾಗಿದೆ.
ಈ ನಡುವೆ ಜಿಲ್ಲೆಯ ಜನಸಂಖ್ಯೆಗೂ ಈಗ ನಡೆದಿರುವ ಸಮೀಕ್ಷೆಯಲ್ಲಿನ ಅಂಕಿ ಅಂಶಗಳಿಗೂ ಹೊಂದಾಣಿಕೆ ಕೊರತೆ ಎದುರಾಗಿದೆ. ಕುಟುಂಬದ ಲೆಕ್ಕದಲ್ಲಿ ನೋಡಿದರೆ ಶೇಕಡವಾರು 108ರಷ್ಟಾಗಿದೆ, ಜನಸಂಖ್ಯೆ ಆಧಾರದ ಮೇಲೆ ಇನ್ನೂ ಬಾಕಿ ಇದೆ. ನಿಗದಿಗಿಂತ ಹೆಚ್ಚು ಕುಟುಂಬಗಳು ಕಂಡು ಬರುತ್ತಿವೆ.
ಜಿಲ್ಲೆಯಲ್ಲಿ 2011ರ ಜನಸಂಖ್ಯೆ ಪ್ರಕಾರ 15.30 ಲಕ್ಷ ಜನರಿದ್ದಾರೆ. 2025ರ ಅಂದಾಜು ಜನಸಂಖ್ಯೆ ಪ್ರಕಾರ 16.28 ಲಕ್ಷ ಜನರಿದ್ದಾರೆ. ಈ ಅಂಕಿ ಅಂಶ ಇಟ್ಟುಕೊಂಡೇ ಸಮೀಕ್ಷೆ ನಡೆಸಲಾಗುತ್ತಿದೆ. ಅ.16ರವರೆಗೆ ಶೇ 97ರಷ್ಟು ಮಂದಿ ಸಮೀಕ್ಷೆಗೆ ಒಳಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 4.17 ಲಕ್ಷ ಕುಟುಂಬಗಳಿವೆ.
ಸೆ.22ರಂದು ಸಮೀಕ್ಷೆ ಆರಂಭವಾಗಿದ್ದು, ಅ.18ಕ್ಕೆ ಕೊನೆಗೊಳ್ಳಬೇಕಿದೆ. ಸಮೀಕ್ಷೆದಾರರು ಕುಟುಂಬದವರ ಮಾಹಿತಿ ಕಲೆಹಾಕಿ ಆ್ಯಪ್‌ನಲ್ಲಿ ದಾಖಲಿಸುತ್ತಿದ್ದಾರೆ. ಆರಂಭದ ಮೂರ್ನಾಲ್ಕು ದಿನ ಸರ್ವರ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆಯಿಂದ ಜಿಲ್ಲೆಯಲ್ಲಿ ಸಮೀಕ್ಷೆ ವಿಳಂಬವಾಗಿತ್ತು. ನಂತರ ವೇಗ ಪಡೆದಿಕೊಂಡಿತು. ಒಂದೇ ದಿನದಲ್ಲಿ ಸುಮಾರು 36 ಸಾವಿರ ಮನೆ ಸಮೀಕ್ಷೆ ನಡೆಸಲಾಗಿತ್ತು. ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಒಳಗೊಂಡ ಗಣತಿದಾರರ ತಂಡಕ್ಕೆ ಪ್ರತಿ ದಿನ 10 ಸಾವಿರ ಮನೆಗಳ ಸಮೀಕ್ಷೆ ನಡೆಸಲು ಗುರಿ ನೀಡಲಾಗಿದೆ.
ನೆಟ್ವರ್ಕ್ ಸಮಸ್ಯೆಯಿರುವ ಶ್ರೀನಿವಾಸಪುರದಂಥ ಗಡಿಭಾಗದ ಪ್ರದೇಶಗಳಲ್ಲಿ ಯಾರೂ ಸಮೀಕ್ಷೆಯಿಂದ ಹೊರಗೆ ಉಳಿಯಬಾರದೆಂಬ ಉದ್ದೇಶದಿಂದ ಸರ್ಕಾರಿ ಕಟ್ಟಡಗಳಲ್ಲಿ ಶಿಬಿರ ಏರ್ಪಡಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಕ್ರಮವಹಿಸಲಾಗಿತ್ತು. ಮುಳಬಾಗಿಲು ತಾಲ್ಲೂಕಿನಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಅಲ್ಲೂ ಶಿಬಿರ ಏರ್ಪಡಿಸಲು ಕ್ರಮವಹಿಸಲಾಗಿತ್ತು.
ಗಣತಿ ಕಾರ್ಯಕ್ಕೆ ಹೋದಾಗ ಯಾವುದಾದರೂ ಮನೆಗಳು ಬೀಗ ಹಾಕಿದ್ದರೆ ಅಂತಹ ಮನೆಗಳ ಮುಂಭಾಗದಲ್ಲಿ ಗಣತಿದಾರರು ಬಂದು ಹೋಗಿದ್ದಾರೆ ಎಂಬುದನ್ನು ತಿಳಿಸಿಕೊಡಲು ಸ್ಟಿಕ್ಕರ್ ಅಂಟಿಸಿ ತಮ್ಮ ದೂರವಾಣಿ ವಿವರವನ್ನು ಬರೆದು ಸಂಪರ್ಕಿಸಲು ತಿಳಿಸಲಾಗಿತ್ತು.
ಕೆಲ ಶಿಕ್ಷಕರು ಸಮೀಕ್ಷೆ ಆ್ಯಪ್‌ಗೆ ಲಾಗಿನ್ ಆಗಿಲ್ಲ, ಸಮೀಕ್ಷೆ ಹೋಗದೇ ಹೊರ ಉಳಿದಿದ್ದಾರೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಯು ವಿಳಂಬ ಪ್ರಕ್ರಿಯೆ, ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಸಂಬಂಧ ಕಾರಣ ಕೇಳಿ ಆಯಾಯ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.
ಜಾತಿವಾರು ಸಮೀಕ್ಷೆ ಸರಿಯಾದ ದಿಕ್ಕಿನಲ್ಲಿ ಸಾಗಿದ್ದು ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ನಿಗದಿತ ಸಮಯದೊಳಗೆ ಗಣತಿ ಮುಗಿಸುವ ಭರವಸೆ ಇದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು. ಕೆಲವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ನಿರಾಕರಿಸಿದ್ದಾರೆ. ಕೆಲ ಕುಟುಂಬಗಳು ವಲಸೆ ಹೋಗಿರಬಹುದು ಕೆಲವರ ಮನೆಗಳಿಗೆ ಗಣತಿದಾರರು ಹೋದಾಗ ಬೀಗ ಹಾಕಿರುವುದು ಕಂಡುಬಂದಿದೆ ಎಂದರು. ಕುಟುಂಬದ ಲೆಕ್ಕದಲ್ಲಿ ನೋಡಿದರೆ ಶೇ 108 ರಷ್ಟು ಗಣತಿ ಆಗಿದೆ ಜನಸಂಖ್ಯೆ ಆಧಾರದ ಮೇಲೆ ನೋಡುವುದಾದರೆ ಶೇ 97ರಷ್ಟು ಆಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಈ ರೀತಿಯ ವ್ಯತ್ಯಾಸ ಕಂಡುಬಂದಿದೆ. ನಮ್ಮಲ್ಲಿ ಬಹುತೇಕ ಕುಟುಂಬಗಳನ್ನು ತಲುಪಿಯಾಗಿದೆ. ಇನ್ನು ಜನರನ್ನು ತಲುಪಬೇಕಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.