ADVERTISEMENT

ಸಾಧನೆ ಜನರ ಮುಂದೆ ಹೇಳಲಿ: ಮಾಜಿ ಸಂಸದರಿಗೆ ಹಾಲಿ ಸಂಸದರ ಸವಾಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 13:18 IST
Last Updated 17 ಸೆಪ್ಟೆಂಬರ್ 2019, 13:18 IST

ಕೋಲಾರ: ‘ಸಂಸದನಾದ ನಾನು ಸಾಮಾನ್ಯ ಪ್ರಜೆಯಾಗಿ ಕೆಲಸ ಮಾಡಲು ಸಿದ್ಧ. ಆದರೆ, ಜನ 28 ಸಂಸದರಾಗಿದ್ದ ಅವರು ಏನು ಸಾಧನೆ ಮಾಡಿದರು ಎಂಬುದನ್ನು ಮೊದಲು ಹೇಳಲಿ’ ಎಂದು ಸಂಸದ ಎಸ್.ಮುನಿಸ್ವಾಮಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಸವಾಲು ಹಾಕಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಲಾರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುವೆ. ಜನರ ಆಶೀರ್ವಾದದಿಂದ ಸತತ ಏಳು ಬಾರಿ ಸಂಸದರಾಗಿದ್ದ ಮುನಿಯಪ್ಪ ಹಿಂದೆ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಜಿಲ್ಲೆಯು 28 ವರ್ಷದಿಂದ ಹಿಂದುಳಿಯಲು ಕಾರಣ ಏನೆಂದು ಮುನಿಯಪ್ಪ ಅವರು ತಿಳಿಸಲಿ. ನಾನು ಎಂದಿಗೂ ಸಂಸದನೆಂದು ಅಹಂಕಾರದಿಂದ ಓಡಾಡಿಕೊಂಡು ಅನ್ಯಾಯ ಮಾಡಿಲ್ಲ. ಮುನಿಯಪ್ಪ ಅವರಿಗೆ ಕೋಲಾರದ ಬಗ್ಗೆ ನಿಜಕ್ಕೂ ಕಾಳಜಿಯಿದ್ದರೆ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಲಿ’ ಎಂದು ತಿರುಗೇಟು ನೀಡಿದರು.

ADVERTISEMENT

‘ನನ್ನದು ಚಿಲ್ಲರೆ ರಾಜಕಾರಣವಲ್ಲ. ಅಂತಹ ಮಾತು ಮುನಿಯಪ್ಪರ ಹಿರಿತನಕ್ಕೆ ಶೋಭೆ ತರುವುದಿಲ್ಲ. ಈಗಾಗಲೇ ಚುನಾವಣೆಯಲ್ಲಿ ಜನ ಯಾರು ಚಿಲ್ಲರೆ ರಾಜಕಾರಣಿ ಎಂದು ನಿರ್ಧರಿಸಿದ್ದಾರೆ’ ಎಂದರು.

ಸತ್ಯ ಹೇಳಲಿ: ‘ಬಡವರು ನೂರಿನ್ನೂರು ರೂಪಾಯಿ ವಿದ್ಯುತ್‌ ಬಿಲ್‌ ಕಟ್ಟದಿದ್ದರೆ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ಮುನಿಯಪ್ಪ ಅವರು ₹ 22 ಲಕ್ಷ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಳ್ಳುವವರೆಗೆ ಬೆಸ್ಕಾಂ ಸಿಬ್ಬಂದಿ ಏನು ಮಾಡುತ್ತಿದ್ದರು? ಇದು ಅಧಿಕಾರ ದುರುಪಯೋಗವಲ್ಲವೇ? ವಿದ್ಯುತ್‌ ಬಿಲ್‌ ಬಾಕಿ ವಿಚಾರದಲ್ಲಿ ಇನ್ನಾದರೂ ಸತ್ಯ ಹೇಳಲಿ’ ಎಂದರು.

‘ಮನೆಯ ವಿದ್ಯುತ್‌ ಬಿಲ್ ₹ 22 ಲಕ್ಷ ಆಗುವವರೆಗೂ ಮುನಿಯಪ್ಪ ಅವರು ಗಮನಿಸುವುದಿಲ್ಲ ಎಂದರೆ ಕೋಲಾರ ಜಿಲ್ಲೆಯನ್ನು ಎಷ್ಟರ ಮಟ್ಟಿಗೆ ಗಮನಿಸುತ್ತಾರೆ?’ ಎಂದು ಕುಟುಕಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಛಲ ಹಿಡಿದು ಸಾಧಿಸುವ ಶಕ್ತಿಯುಳ್ಳವರು. ಅವರು ರೈತರು ಹಾಗೂ ಸಂಕಷ್ಟದಲ್ಲಿರುವವರ ಪರ. ರಾಜ್ಯ ಸರ್ಕಾರದಲ್ಲಿ ಯಡಿಯೂರಪ್ಪ ಅವರೇ ಸುಪ್ರೀಂ ಆಗಿರುವಾಗ ದುರ್ಬಲ ಎಂಬ ಪದ ಬಳಕೆ ಏತಕ್ಕೆ. ಪ್ರವಾಹ ಸಂದರ್ಭದಲ್ಲಿ ಸಚಿವ ಸಂಪುಟವಿಲ್ಲದಿದ್ದರೂ ಒಬ್ಬರೇ ಹಗಲಿರುಳು 22 ಜಿಲ್ಲೆ ಸುತ್ತಿ ಜನರ ಕಷ್ಟ ಆಲಿಸಿದರು. ಹೀಗಾಗಿ ಸಿದ್ದರಾಮಯ್ಯ ಅವರ ಟೀಕೆ ಸರಿಯಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.