ADVERTISEMENT

ಚಿಕ್ಕ ತಿರುಪತಿ; ದೇವರ ದರ್ಶನ ನಿಲ್ಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 9:25 IST
Last Updated 30 ಜೂನ್ 2020, 9:25 IST

ಮಾಲೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭಕ್ತರು ಹೆಚ್ಚಾಗಿ ಬರುತ್ತಿದ್ದು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಭಕ್ತರ ದರ್ಶನವನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ‘ತಮಿಳುನಾಡಿನ ಭಕ್ತರು ಆಷಾಢ ಮಾಸವು ಅತ್ಯಂತ ಶ್ರೇಷ್ಠವೆಂಬ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಭಕ್ತರ ಮೂಲಕ ಸೋಂಕು ಹರಡುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

ಈಗಾಗಲೇ ಗ್ರಾಮದ ಬಳಿಯ ಅಂಚೆಮುಸ್ಕೂರು, ಸಂಪಂಗೆರೆ ಗ್ರಾಮದಲ್ಲಿ ಕೋವಿಡ್–19 ದೃಢಪಟ್ಟಿದೆ. ಇದರಿಂದ ಈ ಭಾಗದ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜತೆಗೆ ದೇವಾಲಯದ ಆವರಣದಲ್ಲಿ ಕೇಶಮುಂಡನೆ ನಿಷೇಧಿಸಿದ್ದರೂ, ಗ್ರಾಮದ ಸುತ್ತಮುತ್ತಲಿನ ಬೇರೆ ಸ್ಥಳಗಳಲ್ಲಿ ಹರಿಕೆ ಹೊತ್ತ ಮಕ್ಕಳಿಗೆ ಕೇಶಮುಂಡನ ಮಾಡುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿದ್ದು, ತಾತ್ಕಾಲಿಕವಾಗಿ ದರ್ಶನ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ADVERTISEMENT

ಈ ವೇಳೆ ತಾಲ್ಲೂಕು ಪಂಚಾಯಿತಿ ಸದಸ್ಯ ಮುನಿರಾಜು, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ದೇವಾಲಯದ ಸಮಿತಿ ಅಧ್ಯಕ್ಷ ನಂದನ್ ವಿ.ಗೌಡ, ಸದಸ್ಯರಾದ ಟಿ.ಆರ್.ವೆಂಕಟೇಶ್ ಗೌಡ, ಎ.ಎಂ.ನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.