ADVERTISEMENT

ಚಿಣ್ಣರೇ ಅತಿಥಿ, ಉದ್ಘಾಟಕರು!

ಅರಾಭಿಕೊತ್ತನೂರಿನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:41 IST
Last Updated 15 ನವೆಂಬರ್ 2022, 5:41 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳೇ ಅಧ್ಯಕ್ಷತೆ ಹಾಗೂ ಅತಿಥಿಗಳಾಗಿ ಕಾರ್ಯಕ್ರಮ ನಡೆಸಿಕೊಟ್ಟರು
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳೇ ಅಧ್ಯಕ್ಷತೆ ಹಾಗೂ ಅತಿಥಿಗಳಾಗಿ ಕಾರ್ಯಕ್ರಮ ನಡೆಸಿಕೊಟ್ಟರು   

ಕೋಲಾರ: ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ಶಾಲೆಗಳಲ್ಲಿ ಸೋಮವಾರ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ವೇದಿಕೆಯಲ್ಲಿ ಮಕ್ಕಳೇ ಮುಖ್ಯ ಅತಿಥಿಗಳು, ಉದ್ಘಾಟಕರು, ಭಾಷಣಕಾರರಾಗಿದ್ದು ವಿಶೇಷ.

ಶಿಕ್ಷಕರು ಕೇವಲ ಸ್ವಾಗತಕಾರರು, ನಿರೂಪಕರಾಗಿ ಮಕ್ಕಳಿಗೆ ಮನರಂಜನೆ ನೀಡಿದ್ದು ಎಲ್ಲವೂ ಚಿಣ್ಣರಮಯವಾಗಿತ್ತು.

ADVERTISEMENT

ಶಾಲಾ ಸಂಸತ್‍ನ ರಾಷ್ಟ್ರಪತಿ ಪಿ.ವೈಷ್ಣವಿ, ಉಪರಾಷ್ಟ್ರಪತಿ ಎಸ್.ಕೆ.ಸಾಹಿತ್ಯ, ಪ್ರಧಾನ ಮಂತ್ರಿ ಎ.ಎಂ.ವೆಂಕಟಾದ್ರಿಗೌಡ, ಗೃಹ ಮಂತ್ರಿ ಬಿ.ಸುಷ್ಮಾ ವೇದಿಕೆಯಲ್ಲಿ ಅತಿಥಿಗಳಾಗಿದ್ದು, ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೆಹರೂ ಕುರಿತು ಮೋನಿಕಾ, ವಿಲಾಸ್ ಮಾತನಾಡಿದರೆ, ಹಂಸವೇಣಿ, ಪಲ್ಲವಿ, ವೈಷ್ಣವಿ ತಂಡದಿಂದ ನೃತ್ಯ ಪ್ರದರ್ಶನ ಮನಸೂರೆಗೊಂಡಿತು.

ಕಾರ್ಯಕ್ರಮದ ಉಸ್ತುವಾರಿಯನ್ನು ಶಾಲಾ ಮಂತ್ರಿ ಮಂಡಳದ ಸ್ವಚ್ಛತಾ ಮಂತ್ರಿ ಎಸ್.ಧನಂಜಯ್, ಆಹಾರ ಮಂತ್ರಿ ಆರ್.ಭವಿಷ್, ಶಿಕ್ಷಣ ಮಂತ್ರಿ ರಾಘವೇಂದ್ರ, ಇತರೆ ಸಚಿವರಾದ ಸಿದ್ದೇಶ್, ಚರಣ್, ಚಂದನಾ, ಹೇಮಲತಾ, ವೇದಾದ್ರಿ, ವಿರೋಧ ಪಕ್ಷದ ನಾಯಕಿ ಪ್ರಿಯಾಂಕಾ, ಅಮೂಲ್ಯ ವಹಿಸಿಕೊಂಡಿದ್ದರು.

ಶಾಲೆಯಲ್ಲಿ ಮಕ್ಕಳಿಗೆ ಪಲಾವ್, ಪಾಯಸ ಸೇರಿದಂತೆ ಸಿಹಿಯೂಟವನ್ನು ಅಡುಗೆ ಸಿಬ್ಬಂದಿ ನೇತ್ರಾವತಿ, ಜಮುನಾ ಬಡಿಸಿದರು. ಶಿಕ್ಷಕರಾದ ವೆಂಕಟರೆಡ್ಡಿ, ಭವಾನಿ, ಶ್ವೇತಾ, ಲೀಲಾ, ಫರೀದಾ, ಚೈತ್ರಾ, ಶ್ರೀನಿವಾಸಲು, ಡಿ.ಚಂದ್ರಶೇಖರ್ ನೃತ್ಯ, ಹಾಡುಗಳ ಮೂಲಕ ಮಕ್ಕಳನ್ನು ರಂಜಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಸಿ.ಎನ್.ಸಿದ್ದೇಶ್ವರಿ ಮಾತನಾಡಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್ ಕೋಲಾರ ಮತ್ತು ರೋಟರಿ ಕೋಲಾರ ನಂದಿನಿ ಆಶ್ರಯದಲ್ಲಿ ತಾಲ್ಲೂಕಿನ ಜಂಗಮಗುರ್ಜೇನಹಳ್ಳಿ ಶಾಲಾ ಮಕ್ಕಳಿಗೆ ಗುಲಾಬಿ ಗಿಡ ವಿತರಿಸಲಾಯಿತು.

‘ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಚರಣೆ ಹಾಗೂ ಮಹಾನ್‌ ವ್ಯಕ್ತಿಗಳ ವಿಶೇಷ ದಿನಗಳಲ್ಲಿ ಗಿಡಗಳನ್ನು ನೆಡಬೇಕು. ಬಾಲ್ಯದಿಂದಲೇ ಈ ಹವ್ಯಾಸ ರೂಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಸ್ಕೌಟ್ ಆಯುಕ್ತರಾದ ಕೆ.ಆರ್.ಸುರೇಶ್‌ ತಿಳಿಸಿದರು.

ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ, ರೋಟರಿ ಕಾರ್ಯದರ್ಶಿ ಸ್ಕೌಟ್ ಬಾಬು ಮಾತನಾಡಿದರು. ಜಿಲ್ಲಾ ಸಂಘಟಕ ವಿಶ್ವನಾಥ್, ಶಿಕ್ಷಕಿ ವಾಸುವಾಂಭ ಮತ್ತು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.