ADVERTISEMENT

ಸೈಕಲ್‌ಗೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಮಕ್ಕಳು

ಖರೀದಿ ಪ್ರಕ್ರಿಯೆ ಅಂತಿಮಗೊಳಿಸಲು ಸರ್ಕಾರದ ಮೀನಾಮೇಷ: ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

ಜೆ.ಆರ್.ಗಿರೀಶ್
Published 8 ಸೆಪ್ಟೆಂಬರ್ 2018, 12:40 IST
Last Updated 8 ಸೆಪ್ಟೆಂಬರ್ 2018, 12:40 IST
ಕೆ.ರತ್ನಯ್ಯ
ಕೆ.ರತ್ನಯ್ಯ   

ಕೋಲಾರ: ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳಾದರೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸೈಕಲ್‌ ಭಾಗ್ಯವಿಲ್ಲ. ಸರ್ಕಾರದ ಹಂತದಲ್ಲಿ ಸೈಕಲ್‌ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸೈಕಲ್‌ಗಳು ವಿದ್ಯಾರ್ಥಿಗಳ ಕೈಸೇರಿಲ್ಲ.

ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಮತ್ತು ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸುವ ಉದ್ದೇಶಕ್ಕಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್‌ ಕೊಡುವ ಯೋಜನೆ ಜಾರಿಗೊಳಿಸಲಾಯಿತು.

ನಗರಪಾಲಿಕೆಗಳ ವ್ಯಾಪ್ತಿಯ ಶಾಲಾ ಮಕ್ಕಳು, ರಿಯಾಯಿತಿ ಬಸ್‌ ಪಾಸ್‌ ಸೌಲಭ್ಯ ಪಡೆದಿರುವ ಮತ್ತು ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ಮಕ್ಕಳಿಗೂ ಸೈಕಲ್‌ ವಿತರಿಸಲಾಗುತ್ತಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಗೆ ದಾಖಲಾಗುವ ಬಾಲಕರು ಹಾಗೂ ಬಾಲಕಿಯರಿಗೆ ಸೈಕಲ್‌ ಕೊಡಲಾಗುತ್ತಿದೆ.

ADVERTISEMENT

ಬಿಜೆಪಿ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಈ ಯೋಜನೆ ಮುಂದುವರಿಸಿತು. ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯ ಸಮ್ಮಿಶ್ರ ಸರ್ಕಾರ ಸಹ ಯೋಜನೆ ಮುಂದುವರಿಸಿದೆ. ಆದರೆ, ಸೈಕಲ್‌ ಖರೀದಿ ಪ್ರಕ್ರಿಯೆ ಅಂತಿಮಗೊಳಿಸಲು ಮೀನಾಮೇಷ ಎಣಿಸುತ್ತಿದೆ.

ಮತ್ತೊಂದೆಡೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸುವ ಸಂಬಂಧ ಈವರೆಗೂ ಅಧಿಕೃತ ಆದೇಶ ಹೊರಡಿಸಿಲ್ಲ. ಸರ್ಕಾರದ ನಡೆ ಗೊಂದಲ ಮೂಡಿಸಿದ್ದು, ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ. ಉಚಿತ ಬಸ್‌ ಪಾಸ್‌ ಇಲ್ಲದೆ, ಸೈಕಲ್‌ ಸಹ ಸಿಗದೆ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ.

ಆರ್ಥಿಕ ಹೊರೆ: ಸಕಾಲಕ್ಕೆ ಸೈಕಲ್‌ ವಿತರಣೆಯಾಗದ ಕಾರಣ ಗ್ರಾಮೀಣ ಭಾಗದ ಕೆಲ ವಿದ್ಯಾರ್ಥಿಗಳು ರಿಯಾಯಿತಿ ದರದ ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ ಸೌಲಭ್ಯ ಪಡೆದಿದ್ದಾರೆ. ಮತ್ತೆ ಕೆಲ ವಿದ್ಯಾರ್ಥಿಗಳು ಸೈಕಲ್‌ ಸಿಗುವ ನಿರೀಕ್ಷೆಯಲ್ಲಿ ಬಸ್‌ ಪಾಸ್‌ ಮಾಡಿಸಿಕೊಂಡಿಲ್ಲ ಮತ್ತು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆದಿಲ್ಲ. ಈ ವಿದ್ಯಾರ್ಥಿಗಳು ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಖಾಸಗಿ ವಾಹನಗಳಲ್ಲಿ ಹಣ ಕೊಟ್ಟು ಪ್ರಯಾಣಿಸುವಂತಾಗಿದೆ. ಮಕ್ಕಳ ಪ್ರಯಾಣ ವೆಚ್ಚ ಭರಿಸುವುದು ಪೋಷಕರಿಗೆ ಆರ್ಥಿಕವಾಗಿ ಹೊರೆಯಾಗಿದೆ.

ಪ್ರಸ್ತಾವ ಸಲ್ಲಿಕೆ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗೆ ಅಗತ್ಯವಿರುವ ಸೈಕಲ್‌ಗಳ ಸಂಬಂಧ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸದ್ಯದಲ್ಲೇ ಸೈಕಲ್‌ ವಿತರಿಸುತ್ತೇವೆ ಎಂದು ಮೂರು ತಿಂಗಳಿಂದ ಸಬೂಬು ಹೇಳುತ್ತಾ ಕಾಲ ದೂಡುತ್ತಿದ್ದಾರೆ. ವಿದ್ಯಾರ್ಥಿಗಳು ಚಾತಕ ಪಕ್ಷಿಗಳಂತೆ ಸೈಕಲ್‌ಗೆ ಕಾಯುತ್ತಿದ್ದಾರೆ.

ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅಗತ್ಯ ಸೈಕಲ್‌ ವಿವರ
ಶೈಕ್ಷಣಿಕ ವಲಯ ಬಾಲಕಿಯರು ಬಾಲಕರು ಸೈಕಲ್‌ಗಳು

ಕೋಲಾರ 1,462 1,392 2,854
ಕೆಜಿಎಫ್‌ 846 769 1,615
ಮಾಲೂರು 937 934 1,871
ಬಂಗಾರಪೇಟೆ 1,028 979 2,007
ಶ್ರೀನಿವಾಸಪುರ 717 750 1,467
ಮುಳಬಾಗಿಲು 1,179 1,013 2, 192

ಅಂಕಿ ಅಂಶ.....
* 125 ಸರ್ಕಾರಿ ಪ್ರೌಢ ಶಾಲೆಗಳು
* 59 ಅನುದಾನಿತ ಪ್ರೌಢ ಶಾಲೆಗಳು
* 12,399 ವಿದ್ಯಾರ್ಥಿಗಳ ದಾಖಲಾತಿ
* 229 ಮಂದಿ ಬಸ್‌ ಪಾಸ್‌– ಹಾಸ್ಟೆಲ್‌ ಸೌಲಭ್ಯ ಪಡೆದವರು
* 20 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು
* 114 ಸೈಕಲ್‌ ಹಿಂದಿನ ವರ್ಷ ಉಳಿಕೆಯಾಗಿವೆ
* 12,006 ಸೈಕಲ್ ಜಿಲ್ಲೆಯ ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.