ADVERTISEMENT

18ಕ್ಕೆ ಚೌಡರೆಡ್ಡಿ ಅಭಿನಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 12:44 IST
Last Updated 14 ಆಗಸ್ಟ್ 2020, 12:44 IST

ಕೋಲಾರ: ‘ಸಾಹಿತ್ಯ ಲೋಕಕ್ಕೆ ಗ್ರಾಮೀಣ ಸೊಗಡು ಪರಿಚಯಿಸುತ್ತಿರುವ ಕವಿ ಹಾಗೂ ಪತ್ರಕರ್ತ ಆರ್.ಚೌಡರೆಡ್ಡಿ ಅವರಿಗೆ ಕವಿ ನಮನ–2020 ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಗರದ ಕೆಇಬಿ ಸಮುದಾಯ ಭವನದಲ್ಲಿ ಆ.18ರಂದು ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರಿಸಿದರು.

‘ಮಾಧ್ಯಮದಲ್ಲಿ ದಿನ ಬೆಳೆಗಾದರೆ ರಾಜಕೀಯ ಕೆಸರೆರಚಾಟದ ಸುದ್ದಿ ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಟ್ರಸ್ಟ್‌ ಸಮಾಜಮುಖಿಯಾದ ಕಾರ್ಯಕ್ರಮ ನೀಡುತ್ತಿದೆ. ಮೊಬೈಲ್ ಮೋಡಿಯಿಂದ ಜನ ದೇಸಿ ಸಂಸ್ಕೃತಿ ಮರೆಯುತ್ತಿರುವ ಸಂದರ್ಭದಲ್ಲಿ ಸಮಾಜಕ್ಕೆ ಗ್ರಾಮೀಣ ಸೊಗಡು ಪರಿಚಯಿಸುತ್ತಿರುವ ಚೌಡರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸದ ವಿಷಯ’ ಎಂದರು.

ADVERTISEMENT

‘ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕಾರ್ಯಕ್ರಮ ಉದ್ಘಾಟಿಸಲಿದ್ದು, ಟ್ರಸ್ಟ್ ಅಧ್ಯಕ್ಷ ಗೋವಿಂದಗೌಡ ಅಧ್ಯಕ್ಷತೆ ವಹಿಸುತ್ತಾರೆ. ಸಾಹಿತಿ ಸಾ.ರಘುನಾಥ್ ಅಭಿನಂದನಾ ಭಾಷಣ ಮಾಡುತ್ತಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಆಶಯ ನುಡಿಗಳನ್ನಾಡುತ್ತಾರೆ’ ಎಂದು ಪರಿಸರ ಲೇಖಕ ಎಚ್.ಎ.ಪುರುಷೋತ್ತಮರಾವ್ ಮಾಹಿತಿ ನೀಡಿದರು.

ಸಹೃದಯಿ ವ್ಯಕ್ತಿ: ‘ಆರೋಗ್ಯಕರ ಸಮಾಜ ರೂಪಿಸುವುದು ಸಾಹಿತಿಗಳ ಕರ್ತವ್ಯ. ಚೌಡರೆಡ್ಡಿ ಅವರು ಸಹೃದಯಿ ವ್ಯಕ್ತಿಯಾಗಿದ್ದು, ತಮ್ಮ ವಿಶಿಷ್ಟ ವ್ಯಕ್ತಿತ್ವ ಮತ್ತು ಸಮಾಜಮುಖಿ ಚಿಂತನೆಯಿಂದ ಗುರುತಿಸಿಕೊಂಡಿದ್ದಾರೆ’ ಎಂದು ಜೆ.ಜಿ.ನಾಗರಾಜ್‌ ಬಣ್ಣಿಸಿದರು.

ಮನ್ವಂತರ ಜನಸೇವಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್, ಖಜಾಂಚಿ ಎಸ್.ಎನ್.ಪ್ರಕಾಶ್, ಮನ್ವಂತರ ಪರಿಸರ ಪಡೆ ಸಂಚಾಲಕ ಬಾಲು, ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಸುಬ್ಬರಾಮಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.