ADVERTISEMENT

ಕಲ್ಯಾಣಿಗೆ ಮರುಜೀವ ನೀಡಿದ ಗ್ರಾಮಸ್ಥರು

ಎಚ್. ಕೋಡಿಹಳ್ಳಿಯ ಐತಿಹಾಸಿಕ ಹಳೆಯ ಕಲ್ಯಾಣಿ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 5:48 IST
Last Updated 24 ಜುಲೈ 2021, 5:48 IST
ಎಚ್.ಕೋಡಿಹಳ್ಳಿ ಗ್ರಾಮದಲ್ಲಿ ಮುಚ್ಚಿ ಹೋಗಿದ್ದ ಕಲ್ಯಾಣಿಯ ಹೂಳು ತೆಗೆದು ಮೂಲ ರೂಪ ನೀಡಿರುವುದು
ಎಚ್.ಕೋಡಿಹಳ್ಳಿ ಗ್ರಾಮದಲ್ಲಿ ಮುಚ್ಚಿ ಹೋಗಿದ್ದ ಕಲ್ಯಾಣಿಯ ಹೂಳು ತೆಗೆದು ಮೂಲ ರೂಪ ನೀಡಿರುವುದು   

ನಂಗಲಿ: ರಾಜ್ಯದ ಗಡಿಯ ಅಂಚಿನ ಎಚ್.ಕೋಡಿಹಳ್ಳಿಯಲ್ಲಿ ಸುಮಾರು 516 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಕಲ್ಯಾಣಿಯನ್ನು ಗ್ರಾಮಸ್ಥರು ಹೂಳು ತೆಗೆದು ಸ್ವಚ್ಛಗೊಳಿಸಿ ಮರುಜೀವ ನೀಡಿದ್ದಾರೆ.

ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕೋಡಿಹಳ್ಳಿಯಲ್ಲಿ ಸುಮಾರು 1505ರಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗುವ ಕಲ್ಯಾಣಿ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹೋಗಿ ಗುರುತೇ ಸಿಗದಂತಾಗಿತ್ತು. ಇದನ್ನರಿತ ಗ್ರಾಮ ಪಂಚಾಯಿತಿ ಸದಸ್ಯ ಕೆ. ವಿ.ನಾಗಾರ್ಜುನ, ನರೇಗಾ ಕಾಮಗಾರಿಯಲ್ಲಿ ಹಾಗೂ ಗ್ರಾಮಸ್ಥರ ಸಹಾಯ ಮತ್ತು ಸಹಕಾರದಿಂದ ಖರ್ಚು ವೆಚ್ಚಗಳನ್ನು ಭರಿಸಿ ವಿನಾಶದ ಅಂಚಿಗೆ ಸಿಲುಕಿದ್ದ ಕಲ್ಯಾಣಿಗೆ ಮತ್ತೆ ಮರು ಜೀವ ನೀಡಿದ್ದಾರೆ.

ಎಚ್.ಕೋಡಿಹಳ್ಳಿ ಐತಿಹಾಸಿಕವಾಗಿ ವಿಜಯನಗರ ಸಾಮ್ರಾಜ್ಯದ ಅರಸ ನರಸಿಂಗರಾಯರ ಆಳ್ವಿಕೆಗೆ ಒಳಪಟ್ಟಿತ್ತು. ಮತ್ತು ಇದಕ್ಕೆ ಪೂರಕ ಎಂಬಂತೆ ಗ್ರಾಮಕ್ಕೆಸಂಬಂಧಿಸಿದಂತೆ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಎರಡು ಶಾಸನಗಳು ಸಿಕ್ಕಿದ್ದು ಗ್ರಾಮದಮಧ್ಯಭಾಗದಲ್ಲಿರುವ ಅರಳಿ ಕಟ್ಟೆಯ ಬಳಿ ಒಂದು ಕನ್ನಡ ಶಾಸನ ಹಾಗೂ ಬಂಗವಾದ ಮಾರ್ಗದ ನೀರುಕುಂಟೆ ಬಳಿ ತೆಲುಗು ಭಾಷೆಯಲ್ಲಿರುವ ಒಂದು ಶಾಸನ ಸಿಕ್ಕಿದೆ.

ADVERTISEMENT

ಆ ಶಾಸನದಲ್ಲಿ 1505 ಕಾಲದ ವಿಜಯನಗರದ ನರಸಿಂಗರಾಯರ ಬಗ್ಗೆ ತೆಲುಗು ಭಾಷೆಯಲ್ಲಿ ಪ್ರಸ್ತಾಪವಾಗಿದೆ. ಹಾಗಾಗಿ ಎಚ್.ಕೋಡಿಹಳ್ಳಿ ಗ್ರಾಮ ಐತಿಹಾಸಿಕವಾಗಿ ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಗಿದೆ.

ಕಲ್ಯಾಣಿ ಗ್ರಾಮದ ಉತ್ತರ ಭಾಗದಲ್ಲಿ ಉತ್ತರ ದಕ್ಷಿಣ 19 ಮೀಟರ್ ಅಗಲ ಮತ್ತು ಪೂರ್ವ ಪಶ್ಚಿಮವಾಗಿ 17 ಮೀಟರ್ ಉದ್ದ ಹಾಗೂ ಸುಮಾರು 45 ಅಡಿಗಳಷ್ಟು ಆಳದ ಕಲ್ಯಾಣಿ ಇದ್ದು, ಇದರ ಬಗ್ಗೆ ಜನ ಗಮನ ನೀಡದ ಕಾರಣದಿಂದ ಸಂಪೂರ್ಣವಾಗಿ ಮಣ್ಣು ಮತ್ತು ಕಲ್ಲುಗಳಿಂದ ಮುಚ್ಚಿ ಹೋಗಿ ಗಿಡಗಳು ಹಾಗೂ ಭಾರೀ ಗಾತ್ರದ ಮರಗಳು ಬೆಳೆದು ಮುಚ್ಚಿ ಹೋಗಿತ್ತು. ಇದನ್ನು ನರೇಗಾ ಯೋಜನೆಯಲ್ಲಿ ಸ್ವಚ್ಛಗೊಳಿಸಿ ಇಡೀ ಕಲ್ಯಾಣಿಯ ಹೂಳು ತೆಗೆದಿರುವುದರಿಂದ ಕಲ್ಯಾಣಿ ನೋಡುಗರನ್ನು ಆಕರ್ಷಿಸುತ್ತಿದೆ.

ಪ್ರಾಚೀನ ಕಾಲದಲ್ಲಿ ಕಲ್ಯಾಣಿಗಳನ್ನು ಕುಡಿಯುವ ನೀರಿಗಾಗಿ ಬಳಸುತ್ತಿದ್ದರು. ಹಾಗಾಗಿ ಕಲ್ಯಾಣಿಯನ್ನು ಸುಸಜ್ಜಿತವಾಗಿ ಗಟ್ಟಿಮುಟ್ಟಾದ ಕಲ್ಲುಗಳಿಂದ ಚತುರ್ಭುಜ ಆಕೃತಿಯಲ್ಲಿ ನಿರ್ಮಿಸಲಾಗಿದೆ. ಕಲ್ಯಾಣಿಗೆ ಹೊಂದಿಕೊಂಡಂತೆ ಒಂದು ಬಾವಿಯೂ ಇದೆ. ನೇರವಾಗಿ ಕಲ್ಯಾಣಿಯಲ್ಲಿ ದಿನ ನಿತ್ಯದ ಕಾರ್ಯಕ್ರಮಗಳಿಗಾಗಿ ನೀರನ್ನು ಬಳಸಿ ಕಲ್ಯಾಣಿಗೆ ಹೊಂದಿಕೊಂಡಿರುವ ಬಾವಿಯ ಕುಡಿಯುವ ನೀರನ್ನು ಬಳಸುತ್ತಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.