ADVERTISEMENT

ಸಿಎಂಆರ್‌ ಮಂಡಿ 3 ದಿನ ಬಂದ್‌

ಮಂಡಿ ವ್ಯವಸ್ಥಾಪಕರಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 28 ಮೇ 2020, 13:05 IST
Last Updated 28 ಮೇ 2020, 13:05 IST
ಕೋಲಾರ ಜಿಲ್ಲಾಡಳಿತ ಕಚೇರಿ
ಕೋಲಾರ ಜಿಲ್ಲಾಡಳಿತ ಕಚೇರಿ   

ಕೋಲಾರ: ‘ಎಪಿಎಂಸಿಯಲ್ಲಿ ಸಿಎಂಆರ್ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಆ ಮಂಡಿಯನ್ನು 3 ದಿನಗಳ ಕಾಲ ಬಂದ್‌ ಮಾಡಿಸಲಾಗಿದೆ’ ಎಂದು ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕಿನ ತಡೆಗೆ ಎಂಪಿಎಂಸಿ ಆಡಳಿತ ಮಂಡಳಿ ನಿರಂತರ ಪ್ರಯತ್ನ ಹೋರಾಟ ನಡೆಸುತ್ತಿದೆ. ಇದಕ್ಕೆ ರೈತರು, ಮಂಡಿ ಮಾಲೀಕರು ಹಾಗೂ ವರ್ತಕರು ಸಹಕರಿಸಬೇಕು’ ಎಂದರು.

‘ಸೋಂಕಿತ ವ್ಯಕ್ತಿಯು ಬೇರೆ ಜಿಲ್ಲೆಗೆ ಹೋಗಿ ಬಂದಿದ್ದು, ಇದೀಗ ಎಸ್‍ಎನ್‍ಆರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸೋಂಕು ಇರುವುದು ಬುಧವಾರ ದೃಢಪಟ್ಟ ಹಿನ್ನೆಲೆಯಲ್ಲಿ ಮಂಡಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತ ವ್ಯಕ್ತಿಯ ಸಹೋದ್ಯೋಗಿಗಳಿಗೆ ಬೇರೆ ಮಂಡಿಗಳಿಗೆ ಹೋಗದಂತೆ ಸೂಚನೆ ನೀಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಸಿಎಂಆರ್‌ ಮಂಡಿಯ ನೌಕರನಿಗೆ ಕೊರೊನಾ ಸೋಂಕು ಇರುವುದು ಖಚಿತವಾದ ನಂತರವೂ ಗುರುವಾರ ಟೊಮೆಟೊ ಹರಾಜು ಪ್ರಕ್ರಿಯೆ ನಡೆಸಿರುವುದು ತಪ್ಪು. ಹರಾಜಿನ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಈ ಸಂಬಂಧ ಜಿಲ್ಲಾಡಳಿತದ ಜತೆ ಚರ್ಚಿಸಿ ಅಗತ್ಯವಿದ್ದರೆ ಮಂಡಿಯ ಸೀಲ್‌ಡೌನ್‌ ಮುಂದುವರಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಪ್ರಯೋಗಾಲಯ: ‘ಆರೋಗ್ಯ ಇಲಾಖೆಯ ವೈದ್ಯಕೀಯ ಸಿಬ್ಬಂದಿಗೆ ಈಗಾಗಲೇ ಎಪಿಎಂಸಿಯಲ್ಲಿ ಕೊಠಡಿ ನೀಡಲಾಗಿದೆ. ವೈದ್ಯಕೀಯ ಸಿಬ್ಬಂದಿಯು ವರ್ತಕರು ಸೇರಿದಂತೆ ಎಲ್ಲರ ತಪಾಸಣೆ ಮಾಡಿದರೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಶಂಕಿತ ಕೊರೊನಾ ಸೋಂಕಿತರ ತಪಾಸಣೆಗೆ ಪ್ರಯೋಗಾಲಯ ಆರಂಭಿಸುವುದು ಒಳ್ಳೆಯದು’ ಎಂದು ಸಲಹೆ ನೀಡಿದರು.

‘ಸಿಎಂಆರ್ ಮಂಡಿಯು ಎಪಿಎಂಸಿ ವ್ಯಾಪ್ತಿಯಿಂದ ಹೊರಗೆ ಇದ್ದು, ಜಿಲ್ಲಾಡಳಿತದ ಸೂಚನೆಯಂತೆ ಮಂಡಿ ಬಂದ್‌ ಮಾಡಿಸುತ್ತಿದ್ದೇವೆ. ಈ ಸಂಬಂಧ ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮಂಡಿಯ ಸುತ್ತ ತಂತಿ ಬೇಲಿ ಹಾಕಲಾಗುತ್ತದೆ’ ಎಂದು ಹೇಳಿದರು.

‘ಎಲ್ಲೆಡೆ ಕೊರೊನಾ ಸೋಂಕಿನ ಆತಂಕವಿದೆ. ಆದ್ದರಿಂದ ರೈತರು ಎಪಿಎಂಸಿಗೆ ಬರಬಾರದು. ತರಕಾರಿಗಳನ್ನು ಸರಕು ಸಾಗಣೆ ವಾಹನದಲ್ಲಿ ಕಳುಹಿಸಿ ಕೊಡಬೇಕು. ತರಕಾರಿ ವಹಿವಾಟಿನ ನಂತರ ರೈತರ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮೂಲಕ ಹಣ ಜಮಾ ಮಾಡಲಾಗುತ್ತದೆ’ ಎಂದರು.ಎಪಿಎಂಸಿ ನಿರ್ದೇಶಕರಾದ ದೇವರಾಜ್, ಅಪ್ಪಯ್ಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.