ADVERTISEMENT

ರಸ್ತೆ ಅಭಿವೃದ್ಧಿಪಡಿಸಿ ಟೋಲ್‌ ಸಂಗ್ರಹಿಸಿ

ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತ ಸಂಘ‌ದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 5:36 IST
Last Updated 11 ಆಗಸ್ಟ್ 2022, 5:36 IST
ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸಲು ಆಗ್ರಹಿಸಿ ರೈತ ಸಂಘದಿಂದ ಲ್ಯಾಂಕೋ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು
ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸಲು ಆಗ್ರಹಿಸಿ ರೈತ ಸಂಘದಿಂದ ಲ್ಯಾಂಕೋ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು   

ಮುಳಬಾಗಿಲು: ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ–75 ಅನ್ನು ಅಭಿವೃದ್ಧಿಪಡಿಸುವರೆಗೂ ಟೋಲ್ ಸಂಗ್ರಹವನ್ನು ಸ್ಥತಗಿತಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ನೇಗಿಲು ಹಿಡಿದು ಪ್ರತಿಭಟನೆ ನಡೆಸಿದರು.

ಹೆದ್ದಾರಿ ಅಭಿವೃದ್ಧಿಪಡಿಸದೆ ಟೋಲ್ ಸಂಗ್ರಹಿಸುತ್ತಿರುವುದು ಹಗಲು ದರೋಡೆಯಾಗಿದೆ. ಲ್ಯಾಂಕೋ ಹಾಗೂ ಎನ್ಎಚ್ಐ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಪ್ರತಿಭಟನನಿರತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.

ಹದಗೆಟ್ಟ ರಸ್ತೆಯಲ್ಲಿ ಅಪಘಾತದಿಂದ ಮೃತಪಡುವವರುಮತ್ತು ಅಂಗವಿಕಲರಾಗುವವರಿಗೆ ಗುತ್ತಿಗೆದಾರರ ಆಸ್ತಿ ಹರಾಜು ಹಾಕಿ ಪರಿಹಾರ ಕೊಡಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶದಂತೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ADVERTISEMENT

ಹೆದ್ದಾರಿಗಳು ವಾಹನ ಸವಾರರಿಗೆ ಯಮಲೋಕ ತೋರಿಸುವ ಹಾದಿಯಾಗಿವೆ. ಪ್ರತಿ ಗಂಟೆಗೊಂದು ಅಪಘಾತ ಸಂಭವಿಸುತ್ತದೆ. ಮಳೆ ಬಿದ್ದರೆ ಕೆರೆ-ಕುಂಟೆಗಳಾಗಿ ಮಾರ್ಪಟ್ಟು ರಸ್ತೆಯೋ, ಕೆರೆಯೋ ಎಂಬಂತಾಗುತ್ತದೆ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ರಸ್ತೆಯಲ್ಲಿ ಸೂಚನಾ ಫಲಕ ಅಳವಡಿಸಬೇಕು. ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನ ರಾಮಸಂದ್ರ ಗಡಿಭಾಗದಿಂದ ಮುಳಬಾಗಿಲು ಬೈಪಾಸ್ ವರೆಗೆ ಸರ್ವೀಸ್‌ ರಸ್ತೆಯನ್ನು ಪ್ರಭಾವಿ ರಾಜಕಾರಣಿಗಳು ಹಾಗೂ ಅಕ್ರಮ ಡಾಬಾ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಆದತರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೌನ ವಹಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.

12 ವರ್ಷದಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಆದರೆ ರಸ್ತೆಯ ಅಭಿವೃದ್ಧಿ ಮಾತ್ರ ಮರೀಚಿಕೆ ಆಗಿದೆ. ನಿಯಮದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಡಾಂಬರೀಕರಣ ಮಾಡಬೇಕೆಂದು ನಿಯಮ ಉಲ್ಲಂಘಿಸಲಾಗುತ್ತಿದೆ ಎಂದರು.

ವಿಭಾಗೀಯ ಕಾರ್ಯದರ್ಶಿ ಫಾರೂಖ್ ಪಾಷಾ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಜ್ಯ ಮುಖಂಡ ಬಂಗಾರಿ ಮಂಜು, ಭಾಸ್ಕರ್, ತಾಲೂಕು ಗೌರವಾಧ್ಯಕ್ಷ ವಿಶ್ವ, ರಾಜೇಶ್, ಸುನೀಲ್‌ಕುಮಾರ್‌ ಸಂತೋಷ್, ವೇಣು, ಪೊಂಬರಹಳ್ಳಿ ನವೀನ್, ಸಂದೀಪ್ರೆಡ್ಡಿ, ಸಂದೀಪ್‌ ಗೌಡ, ಕಿರಣ್, ರಾಮಮೂರ್ತಿ, ಪದ್ಮಘಟ್ಟ ಧರ್ಮ, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ, ಮುರಳಿ, ಸುಪ್ರೀಂಚಲ ಗುರುಪ್ರಸಾದ್, ಈಕಂಬಳ್ಳಿ, ಯಲ್ಲಣ್ಣ, ಮಂಗಸಂದ್ರ ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ಪುತ್ತೇರಿ ನಾರಾಯಣಸ್ವಾಮಿ ಇದ್ದರು.

ಬಳಿಕ ಉಪ ತಹಶೀಲ್ದಾರ್ ಸಿ.ಸುಬ್ರಮಣಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಸುಬ್ರಮಣಿ ರಸ್ತೆಯ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.