ADVERTISEMENT

ಕೋಲಾರ | ಜ್ಞಾನ, ಕೌಶಲ ಕೇಂದ್ರವಾಗಿ ಸಮುದಾಯ ಭವನ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:19 IST
Last Updated 17 ಅಕ್ಟೋಬರ್ 2025, 7:19 IST
ಕೋಲಾರದಲ್ಲಿ ಗುರುವಾರ ಎಸ್‌ಸಿ ಮತ್ತು ಎಸ್‌ಟಿ ಜಾಗೃತಿ ಸಮಿತಿ ಸಭೆ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ನಡೆಯಿತು
ಕೋಲಾರದಲ್ಲಿ ಗುರುವಾರ ಎಸ್‌ಸಿ ಮತ್ತು ಎಸ್‌ಟಿ ಜಾಗೃತಿ ಸಮಿತಿ ಸಭೆ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ನಡೆಯಿತು   

ಕೋಲಾರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ವಿವಿಧ ಸಮುದಾಯ ಭವನಗಳನ್ನು ಅಧ್ಯಯನ ಹಾಗೂ ಕೌಶಲ ಕೇಂದ್ರಗಳನ್ನಾಗಿಸಿ ಯುವಕರ ಶೈಕ್ಷಣಿಕ ಅಭಿವೃದ್ಧಿಗಾಗಿ ಜ್ಞಾನ ಕೇಂದ್ರಗಳನ್ನಾಗಿ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಸಮುದಾಯ ಭವನಗಳನ್ನು ಒಳ್ಳೆಯ ಉದ್ದೇಶ ಇಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ಆದರೆ, ಅವುಗಳು ಸರಿಯಾಗಿ ಬಳಕೆ ಆಗುತ್ತಿಲ್ಲ. ಸಮರ್ಪಕವಾಗಿ ಬಳಕೆ ಮಾಡಲು ಕ್ರಮವಹಿಸಿದ್ದು, ರಾಜ್ಯಕ್ಕೆ ಮಾದರಿಯಾಗಲಿದೆ. ಕೇಂದ್ರದಲ್ಲಿ ಗ್ರಂಥಾಲಯ, ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು. ಇದಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ADVERTISEMENT

ಕೋಲಾರ ನಗರಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಯ ಉಳಿತಾಯ ಹಣವನ್ನು ಪಡೆದು ಅದರ ಜೊತೆಗೆ ಗ್ರಂಥಾಲಯ ಸಮಿತಿಯ ವಿಶೇಷ ಅನುದಾನ ಬಳಸಿಕೊಂಡು ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಡಿಜಿಟಲ್ ಗ್ರಂಥಾಲಯ ಒಳಗೊಂಡು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇದು ಮುಂದಿನ ತಿಂಗಳು ಪೂರ್ಣಗೊಳ್ಳುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೂಲಸೌಕರ್ಯ, ನಿವೇಶನ, ಸ್ಮಶಾನ, ಮನೆ, ಆರೋಗ್ಯ, ಶಿಕ್ಷಣ ಒದಗಿಸುವುದರಲ್ಲಿ ಯಾವುದೇ ಲೋಪವಾಗಬಾರದು ಎಂದು ತಿಳಿಸಿದರು.

‘ಎಲ್ಲಾ ತಹಶೀಲ್ದಾರ್‌ಗಳು ಸ್ಮಶಾನ ಜಾಗಗಳ ಪರಿಸ್ಥಿತಿಯ ಮಾಹಿತಿ ಪಡೆದುಕೊಳ್ಳಿ, ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಗಡಿ ಗುರುತಿಸಿ ಬೇಲಿ ನಿರ್ಮಿಸಬೇಕು. ಆ ನಂತರ ಗ್ರಾಮ ಪಂಚಾಯಿತಿಯಿಂದ ಸೌಲಭ್ಯ ಕಲ್ಪಿಸಬೇಕು’ ಎಂದು ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌ ಮಾತನಾಡಿ, ‘ಜಿಲ್ಲೆಯಾದ್ಯಂತ ಈವರೆಗೆ 104 ಅಂಬೇಡ್ಕರ್‌ ಭವನಗಳ ನಿರ್ಮಾಣ ಪೂರ್ತಿಯಾಗಿವೆ. ಅವುಗಳನ್ನು ಅಧ್ಯಯನ ಕೇಂದ್ರಗಳನ್ನಾಗಿ ಮಾರ್ಪಡು ಮಾಡಲು ಚಿಂತಿಸಲಾಗಿದೆ’ ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಯುವಕರು ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಅವರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರೆ ದೈಹಿಕವಾಗಿ ಸದೃಢವಾಗುವಂತೆ ಮಾಡಬಹುದು. ಆಗ ಅನಗತ್ಯ ವಿಚಾರಗಳತ್ತ ಅಲೋಚನೆ ಹೋಗುವುದಿಲ್ಲ. ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬಹುದು’ ಎಂದು ಸಲಹೆ ನೀಡಿದರು.

ಜಾಗೃತಿ ಸಮಿತಿ ಸದಸ್ಯ ವರದೇನಹಳ್ಳಿ ವೆಂಕಟೇಶ್‌ ಮಾತನಾಡಿ, ‘ಟೇಕಲ್‌ ಭಾಗದ ಕಲ್ಲು ಗಣಿಯಲ್ಲಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸ್ಫೋಟಕಗಳನ್ನು ಬಳಕೆ ಮಾಡಿ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಇಂಥ ವಿರುದ್ಧ ಕ್ರಮಿನಲ್‌ ಪ್ರಕರಣ ದಾಖಲಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.

ನರಸಾಪುರ ಹೋಬಳಿ ಸೊಣ್ಣೇನಹಳ್ಳಿ ಸಮೀಪ ಕಲ್ಲು ಸುಡುತ್ತಿದ್ದವರನ್ನು ಹಿಡಿದು ಪ್ರಕರಣ ದಾಖಲು ಮಾಡಿದ್ದಾರೆ. ಇಲ್ಲಿ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಸಾಂಪ್ರದಾಯಿಕವಾಗಿ ಕಲ್ಲು ಕುಟುಕರಿಗೆ ಅಧಿಕೃತವಾಗಿ ದಾಖಲೆ ನೀಡಿರಲಿಲ್ಲ. ಸಂಪೂರ್ಣ ಮಾಹಿತಿ ಪಡೆದು ಈ ತಿಂಗಳ ಅಂತ್ಯದೊಳಗೆ ದಾಖಲೆ ನೀಡಲು ಕ್ರಮವಹಿಸಲಾಗುವುದು’ ಎಂದರು.

ದೊಡ್ಡ ದೊಡ್ಡ ಕಲ್ಲು ಗಣಿಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಅಂತಹ ಕಡೆ ಮಾಡಿರುವ ತಪ್ಪುಗಳಿಂದ ಪ್ರಾಣ ಹಾನಿ ಸಂಭವಿಸಿದೆ ಪರಿಹಾರ ನೀಡಲು ಅವಕಾಶವಿಲ್ಲ, ಕ್ವಾರಿಯಲ್ಲಿ ಮೃತಪಟ್ಟರೆ ಇಲಾಖೆಯಿಂದ ಕೊಡಲು ಅವಕಾಶವಿದೆ. ಈ ಬಗ್ಗೆ ಈಗಾಗಲೇ ಮಾಲೀಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

ಸದಸ್ಯ ಬೆಳಮಾರನಹಳ್ಳಿ ಆನಂದ್‌ ಮಾತನಾಡಿ, ಜಮೀನಿನಲ್ಲಿ ಹಲವು ದಶಕಗಳಿಂದ ಅನುಭೋಗದಲ್ಲಿ ಇದ್ದರೂ ಬಡವರಿಗೆ ಖಾತೆಯಾಗಿಲ್ಲ. ಅವರಿಗೆಲ್ಲ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.

ಆಗ ಜಿಲ್ಲಾಧಿಕಾರಿ ಮಾತನಾಡಿ, ‘ಪೋಡಿ ಅಭಿಯಾನ ನಡೆಯುತ್ತಿದ್ದು, ಈ ವೇಳೆ ಹಲವು ಸಮಸ್ಯೆಗಳು ಕಂಡು ಬಂದಿದೆ, ಒಟ್ಟು 5 ಸಾವಿರ ಪೋಡಿ ಮಾಡಲಾಗಿದ್ದು, ಅಕ್ರಮ ಸಕ್ರಮ ಅಡಿಯಲ್ಲಿ ದಾಖಲೆಗಳನ್ನು ಪರಿಶೀಲಿಸದೆ ದಾಖಲೆ ಮಾಡಿರುವ ವಿಚಾರದಲ್ಲಿ ತಹಶೀಲ್ದಾರ್‌, ಅಧ್ಯಕ್ಷರು ತೊಂದರೆ ಅನುಭವಿಸಿದ್ದಾರೆ. ಕೋಲಾರ, ಮಾಲೂರಲ್ಲಿ ಹಾಗೂ ಇತರೆ ತಾಲ್ಲೂಕುಗಳಲ್ಲೂ ಎಚ್ಚರಿಕೆಯಿಂದ ಕಡತ ತಯಾರಿಸಿ ಬಡವರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌, ಹೆಚ್ಚಿವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್‌, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಸರ್ಕಾರಿ ಅಭಿಯೋಜಕರಾದ ಮಾಧವ ಪದ್ಮನಾಭ ಗಾವ್ಕರ್, ತಹಶೀಲ್ದಾರ್‌ಗಳಾದ ಡಾ.ಎಂ.ನಯನಾ, ರೂಪಾ, ಸುಧೀಂದ್ರ ಇದ್ದರು.

ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಜಿಲ್ಲಾ ಜಾಗೃತಿ ಸಮಿತಿಯಿಂದ ಹೊಸ ವಿಚಾರಗಳ ಕುರಿತು ಚಿಂತನೆ ನಡೆಯಬೇಕಿದೆ
ಎಂ.ಆರ್‌.ರವಿ ಜಿಲ್ಲಾಧಿಕಾರಿ
ಪರಿಶಿಷ್ಟ ಜಾತಿ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಮಾಡಬೇಕು. ಪ್ರತಿ ಎರಡನೇ ಭಾನುವಾರ ಈ ಕುರಿತು ಸಭೆ ನಡೆಸಲಾಗುವುದು
ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಜಾತಿ ಕಾರಣಕ್ಕೆ ನಿರ್ಲಕ್ಷಿಸಿದರೆ ಕ್ರಮ
‘ಜಾತಿ ಕಾರಣಕ್ಕೆ ನಿರ್ಲಕ್ಷ್ಯ ಮಾಡಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. ಹಿಂದೆ ನಡೆದಿರುವ ರೀತಿ ಪ್ರಕರಣ ಮರು ಕಳಿಸುವುದು ಬೇಡ. ಶಾಸಕರು ಶಿಫಾರಸ್ಸು ಮಾಡಿದರೂ ಕೆಲಸ ನೀಡದೆ ಇರುವ ಬಗ್ಗೆ ಗಮನಕ್ಕೆ ಇದೆ. ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಸೂಚಿಸಿದರು. ಸಭೆಯಲ್ಲಿ ಸದಸ್ಯ ವರದೇನಹಳ್ಳಿ ವೆಂಕಟೇಶ್‌ ಪ್ರಸ್ತಾಪಿಸಿದ ವಿಚಾರಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ವರದೇನಹಳ್ಳಿ ವೆಂಕಟೇಶ್‌ ಮಾತನಾಡಿ ‘ಕ್ರೆಡಿಲ್‌ನಲ್ಲಿ ಜೆಇ ಮಂಜುನಾಥ್‌ ಕೆಲಸದ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆ. ಎಸ್‌ಸಿ ಎಸ್‌ಟಿ ಕಡತಗಳು ಹೋದರೆ ವಿಲೇ ಮಾಡುವುದಿಲ್ಲ. ವರದೇನಹಳ್ಳಿಯಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿ ಐದು ವರ್ಷ ಕಳೆದಿದ್ದರೂ ಬಿಲ್‌ ಪಾವತಿಸಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.