ADVERTISEMENT

ಕೋಲಾರ | ದಲಿತರನ್ನು ಕಾಂಗ್ರೆಸ್‌ ಪಕ್ಷ ಕಡೆಗಣಿಸಿಲ್ಲ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:50 IST
Last Updated 23 ಆಗಸ್ಟ್ 2025, 4:50 IST
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಕೋಲಾರ: ‘ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ದಲಿತರನ್ನು ಕಡೆಗಣಿಸಿಲ್ಲ. ಎಡಗೈ ಸಮುದಾಯಕ್ಕೆ ಯಾವುದೇ ರೀತಿ ಅನ್ಯಾಯ ಆಗಿಲ್ಲ. ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಮೇಲೆ ಮಾಡುತ್ತಿರುವ ಆರೋಪಗಳು ಸುಳ್ಳು’ ಎಂದು ವೇಮಗಲ್‌ ಭಾಗದ ಕಾಂಗ್ರೆಸ್‌ ಪಕ್ಷದ ದಲಿತ ಮುಖಂಡರು ತಿರುಗೇಟು ನೀಡಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ‘ವೇಮಗಲ್- ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಲು ಕೊತ್ತೂರು ಮಂಜುನಾಥ್ ಹಾಗೂ ಅನಿಲ್ ಕುಮಾರ್ ಕಾರಣ ಅಲ್ಲ. ಈ ರೀತಿ ಕೆಲವರು ಆರೋಪ ಮಾಡುತ್ತಿರುವುದು ಸರಿ ಅಲ್ಲ’ ಎಂದರು.

ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಮುನಿಯಪ್ಪ ಮಾತನಾಡಿ, ‘ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಸ್ಥಳೀಯ ವಾಸ್ತವಾಂಶ ಏನು ಗೊತ್ತಿದೆ? ಬಂಗಾರಪೇಟೆಯಲ್ಲಿ ಇರುವ ಅವರಿಗೆ ಹೇಗೆ ಗೊತ್ತಾಗುತ್ತದೆ’ ಎಂದು ಪ್ರಶ್ನಿಸಿದರು.

ADVERTISEMENT

ನಾರಾಯಣಸ್ವಾಮಿ ಅವರನ್ನು ಆಹ್ವಾನಿಸಿಲ್ಲ ಎಂಬ ಪ್ರಶ್ನೆಗೆ, ‘ಅದು ದೊಡ್ಡವರ ಮಟ್ಟಕ್ಕೆ ಬಿಟ್ಟಿದ್ದು. ನಮಗೂ ಅವರಿಗೂ ಅಜಗಜಾಂತರವಿದೆ. ಆ ದೊಡ್ಡವರ ಬಗ್ಗೆ ನಾವು ಏಕೆ ಮಾತನಾಡಬೇಕು’ ಎಂದು ಜಾರಿಕೊಂಡರು.

ಚುನಾವಣೆಯಲ್ಲಿ ಕೊತ್ತೂರು ಮಂಜುನಾಥ್ ಹಾಗೂ ಅನಿಲ್ ಕುಮಾರ್‌ ದಲಿತರು ಸೇರಿದಂತೆ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಮಾಡಿದ್ದರು. ಈ ಬಗ್ಗೆ ದಾಖಲೆ ಸಮೇತ ತೋರಿಸುವೆ’ ಎಂದರು.

ನಮ್ಮ ಪಕ್ಷದಲ್ಲಿಯೇ ಇದ್ದ ಕೆಲವರಿಂದ ಸ್ವಲ್ಪ ತೊಂದರೆಯಾಗಿ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಅಂತಹವರನ್ನ ಗುರುತಿಸಿ ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ. ಸೋಲಿಗೆ ಕಾರಣ ಯಾರು ಎಂಬುದು ಜನತೆಗೆ ತಿಳಿದಿದೆ’ ಎಂದು ಹೇಳಿದರು.

‘ಈ ಚುನಾವಣೆಯಲ್ಲಿ ಮೈತ್ರಿ ಪಕ್ಷದವರು ಹಣ ಹೆಚ್ಚು ಕೊಟ್ಟು ಮತ ಹಾಕಿಸಿಕೊಂಡಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಗ್ಯಾರಂಟಿ ಕೆಲಸ ಮಾಡಿದರೆ, ಇನ್ನು ಕೆಲವು ವಾರ್ಡ್‌ಗಳಲ್ಲಿ ದುಡ್ಡು ಕೆಲಸ ಮಾಡಿದೆ. ಹತ್ತು, ಹದಿನೈದು ಪಟ್ಟು ದುಡ್ಡು ಕೆಲಸ ಮಾಡಿದ್ದರಿಂದ ಕೆಲವರು ಗೆದ್ದಿದ್ದಾರೆ’ ಎಂದು ಆರೋಪಿಸಿದರು.

ಕೋಲಾರ ಗ್ರಾಮಾಂತರ ಎಸ್‌ಸಿ ಬ್ಲಾಕ್ ಅಧ್ಯಕ್ಷ ಬೆಟ್ಟಹೊಸಪುರ ಮಾತನಾಡಿ, ‘ನಮ್ಮಲ್ಲಿರುವ ವ್ಯಕ್ತಿಗಳನ್ನು ಮೈತ್ರಿ ಪಕ್ಷದವರು ನಿಲ್ಲಿಸಿಕೊಂಡಿರುವುದು, ನಮ್ಮಲ್ಲಿ ಇದ್ದವರೇ ಇವತ್ತು ಅಲ್ಲಿ ಇರುವುದು. ನಮ್ಮ ಅಭ್ಯರ್ಥಿಗಳು ಅತಿ ಕಡಿಮೆ ಮತದಿಂದ ಸೋತಿದ್ದಾರೆ’ ಎಂದರು,

ಹೊಸ ಕೌನ್ಸಿಲರ್ ಶಶಿಕಲಾ ನಾಗೇಶ್ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರ ಬಡವರ ಪರವಿದೆ. ವಿ.ಆರ್‌.ಸುದರ್ಶನ್ ಅವರು ಪಟ್ಟಣ ಪಂಚಾಯತಿ ಆಗಲು, ಜೊತೆಗೆ ಚುನಾವಣೆ ನಡೆಯಲು ಶ್ರಮ ಪಟ್ಟಿದ್ದಾರೆ. ಆದರೆ, ಕೆಲ ವಾರ್ಡ್‌ಗಳಲ್ಲಿ ಮತದಾರರ ನಮ್ಮ ಕೈಹಿಡಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮಲ್ಲಿ ಮೂವರಯ ದಲಿತ ಅಭ್ಯರ್ಥಿಗಳಯ ಸ್ಪರ್ಧಿಸಿದ್ದರು. ಅದರಲ್ಲಿ ಇಬ್ಬರು ಗೆದ್ದಿದ್ದೇವೆ. ಇನ್ನೊಬ್ಬರು ಕಡಿಮೆ ಅಂತರದಲ್ಲಿ ಸೋತಿದ್ದಾರೆ ಎಂದರು.

ವೇಮಗಲ್ ಸೊಸೈಟಿ ನಿರ್ದೇಶಕ ರವಿಕುಮಾರ್ ಮಾತನಾಡಿ, ‘ದಲಿತ ನಾಯಕರನ್ನ ನಿರ್ಲಕ್ಷಿಸಿ ಪಟ್ಟಣ ಪಂಚಾಯತಿ ಚುನಾವಣೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿರುವವರು ಹೊರಗಿನವರು. ಅವರು ತಮ್ಮ ತೆವಲಿಗೆ ಏನೇನೋ ಮಾತನಾಡುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಸೇರಿ 5,821 ಮತಗಳನ್ನು ಪಡೆದುಕೊಂಡಿವೆ. ಕಾಂಗ್ರೆಸ್‌ 5,470 ಮತ ಪಡೆದುಕೊಂಡಿದೆ’ ಎಂದು ಹೇಳಿದರು.

ಎಡಗೈ ಸಮುದಾಯಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ, ಯಾವುದೇ ರೀತಿಯಲ್ಲಿ ಕಡೆಗಣಿಸಿಲ್ಲ ಎಂದು ಮಲಿಯಪ್ಪನಹಳ್ಳಿ ತಿರುಮಲಪ್ಪ ಹೇಳಿದರು.

ಕಲ್ವಮಂಜಲಿ ರೈತ ಮುಖಂಡ ರಾಮುಶಿವಣ್ಣ, ‘ಫಲಿತಾಂಶದ ಬಗ್ಗೆ ಈಗ ಟೀಕೆ ಟಿಪ್ಪಣಿ ಮಾಡುತ್ತಿರುವ ವ್ಯಕ್ತಿಗಳಿಗೆ ಏನು ಕೆಲಸ ಇಲ್ಲ, ಇಲ್ಲಿ ಮತವು ಇಲ್ಲ. ಇಲ್ಲಿ ಬಂದು ಪ್ರಚಾರವನ್ನೂ ಮಾಡಿಲ್ಲ. ಆದರೆ ಫಲಿತಾಂಶ ಬಂದ ನಂತರ ಕೊತ್ತೂರು ಮಂಜುನಾಥ್ ಮತ್ತು ಅನಿಲ್ ಕುಮಾರ್ ಅವರು ದಲಿತ ಮುಖಂಡರನ್ನು ಕಡೆಗಣಿಸಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ. ಯೋಗ್ಯತೆ ಇದ್ದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ಗೆದ್ದು ತೋರಿಸಲಿ’ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಸೊಸೈಟಿ ಮಾಜಿ ಅಧ್ಯಕ್ಷ ಶೈಲಜಾ ಪಿ.ವೆಂಕಟೇಶ್, ಕೌನ್ಸಿಲರ್ ಪುರಹಳ್ಳಿ ಗಂಗಪ್ಪ, ನಾಚಹಳ್ಳಿ‌ ದೇವರಾಜ್, ಕಾಂಗ್ರೆಸ್ ಮುಖಂಡರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.