ADVERTISEMENT

ನಾರಾಯಣಸ್ವಾಮಿಯವರೇ, ನಿಮ್ಮ ತಂಟೆಗೆ ಬಂದಿಲ್ಲ: ಕೊತ್ತೂರು ಮಂಜುನಾಥ್‌

ನಾನು ಎಚ್ಚರಿಕೆ, ಭಯದಿಂದಲೇ ಇರುತ್ತೇನೆ: ಸ್ವಪಕ್ಷೀಯ ಶಾಸಕನಿಗೆ ಕೊತ್ತೂರು ಮಂಜುನಾಥ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:22 IST
Last Updated 10 ಜುಲೈ 2025, 5:22 IST
ಕೊತ್ತೂರು ಮಂಜುನಾಥ್‌
ಕೊತ್ತೂರು ಮಂಜುನಾಥ್‌   

ಕೋಲಾರ: ‘ಎಸ್‌.ಎನ್‌.ನಾರಾಯಣಸ್ವಾಮಿಯವರೇ ತಮ್ಮ ಸಲಹೆಯಂತೆ ನಾನು ಬಹಳ ಎಚ್ಚರಿಕೆಯಿಂದಲೇ ಇರುತ್ತೇನೆ. ನಾನು ನಿಮ್ಮ ತಂಟೆಗೆ ಬಂದಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ತಿರುಗೇಟು ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಸಕ ಕೆ.ವೈ. ನಂಜೇಗೌಡರ ಮೇಲೆ ತಾವು ಆರೋಪ ಮಾಡಿದ್ದು, ತನಿಖೆ ನಡೆಯಲಿ. ಅದಕ್ಕೆ ನನ್ನ ಬೆಂಬಲವೂ ಇರಲಿದೆ. ಆದರೆ, ಅಧಿವೇಶನದಲ್ಲಿ ಕೋಚಿಮುಲ್‌ ವಿಚಾರವಾಗಿ ಅವರು ಪ್ರಶ್ನೆ ಮಾಡಿದ್ದರು. ಒಕ್ಕೂಟದಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂಬುದಾಗಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಉತ್ತರವನ್ನೂ ನೀಡಿದ್ದಾರೆ. ಉತ್ತರ ಕೊಟ್ಟ ಮೇಲೂ ತಾವು ಮತ್ತೆ ಮತ್ತೆ ಈ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದು, ಹಗರಣ ನಡೆದದ್ದು, ನಿಜ ಎನ್ನುವುದಾದರೆ ಸಹಕಾರ ಸಚಿವರ ಮೇಲೆ ಸ್ಪೀಕರ್‌ಗೆ ದೂರು ಕೊಡಿ’ ಎಂದರು.

‘ಕೋಚಿಮುಲ್‌ ಹಗರಣ ನಡೆದಿದ್ದರೆ ಮುಖ್ಯಮಂತ್ರಿಗೆ ಹೇಳಿ ತನಿಖೆ ಮಾಡಿಸಲಿ. ತನಿಖೆ ನಡೆದು ಸತ್ಯ ಹೊರಬರಲಿ. ನಾನು ನಾರಾಯಣಸ್ವಾಮಿ ಅವರಿಗೂ ಬೆಂಬಲ ನೀಡಲ್ಲ, ನಂಜೇಗೌಡರಿಗೂ ಬೆಂಬಲ ನೀಡಲ್ಲ. ಭ್ರಷ್ಟಾಚಾರಕ್ಕೆ ನನ್ನ ಬೆಂಬಲ ಇಲ್ಲ’ ಎಂದು ನುಡಿದರು.

ADVERTISEMENT

‘ಅವರ ಬಾರ್ಡರ್‌ನಲ್ಲಿ ಓಡಾಡಬೇಕೆಂದರೆ ನಾನು ಸದಾ ಎಚ್ಚರಿಕೆಯಿಂದಲೇ ಇರುತ್ತೇನೆ, ಭಯದಿಂದಲೇ ಓಡುತ್ತೇನೆ’ ಎಂದು ಲೇವಡಿ ಮಾಡಿದರು.

‘ಕೋಮುಲ್‌ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಯಾವುದೇ ಸಂಧಾನ, ಒಪ್ಪಂದ ನಡೆದಿಲ್ಲ. ಸಭೆಯೂ ನಡೆದಿಲ್ಲ. ನನ್ನ ಬಳಿ, ನಂಜೇಗೌಡ, ರಮೇಶ್‌ ಕುಮಾರ್‌, ನಸೀರ್‌ ಅಹ್ಮದ್‌ ಜೊತೆ ಯಾವುದೇ ವಿಚಾರ ಪ್ರಸ್ತಾಪವಾಗಿಲ್ಲ. ಇನ್ನುಳಿದವರು ಏನು ಮಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ’ ಎಂದು ತಿಳಿಸಿದರು.

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಚರ್ಚಿಸಿದೆ. ಶಾಸಕನಾಗಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಮಾಡಿರುವ ಸಾಧನೆ ಬಗ್ಗೆ ಕೇಳಿದರು. ಸಂಪೂರ್ಣವಾಗಿ ವಿವರಿಸಿದ್ದೇನೆ. ಇಡೀ ರಾಜ್ಯದಲ್ಲಿ ಕೋಲಾರದಲ್ಲಿ ಮಾತ್ರ ಸರ್ಕಾರದ ಎಲ್ಲಾ ಶಾಲೆ, ಅಂಗನವಾಡಿ, ಆಸ್ಪತ್ರೆಗಳ ಆಸ್ತಿಯನ್ನು ಖಾತೆ ಮಾಡಿಕೊಡಲಾಗಿದೆ ಎಂಬುದಾಗಿ ಹೇಳಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು. ಗುರಿ ಮುಟ್ಟಲು ಇನ್ನೂ ಮೂರು ವರ್ಷವಿದೆ ಎಂಬುದಾಗಿ ವಿವರಿಸಿದೆ. ಎಲ್ಲಾ ಸಚಿವರು ಸಹಕಾರ ನೀಡುತ್ತಿದ್ದಾರೆ ಎಂಬುದನ್ನೂ ಹೇಳಿದೆ’ ಎಂದರು.

‘ನಾನು ಕೇವಲ ಸುರ್ಜೇವಾಲಾ ಜೊತೆ 11 ನಿಮಿಷ ಚರ್ಚಿಸಿದೆ. ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ 46 ನಿಮಿಷ ತೆಗೆದುಕೊಂಡರು, ಶಾಸಕಿ ರೂಪಕಲಾ ಅರ್ಧ ಗಂಟೆ ಚರ್ಚಿಸಿದ್ದಾರೆ. ಶಾಸಕ ಪ್ರದೀಪ್‌ ಈಶ್ವರ್‌ ಕೂಡ ದಾಖಲೆ ಬಂಡಲ್‌ಗಳೊಂದಿಗೆ ಸುಮಾರು ಹೊತ್ತು ಇದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.